`ಜನರಾಜ್ಯೋತ್ಸವ’ ಪ್ರಶಸ್ತಿ

ಗೌರಿ ಲಂಕೇಶ್
ನವಂಬರ್ 16, 2016
ಬೆಂಗಳೂರು ಮಿರರ್ ಪತ್ರಿಕೆಯ ಸಂಪಾದಕರು ನನ್ನ ಅಂಕಣವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ.
ಆದಿವಾಸಿ ಹೋರಾಟಗಾರ ಸೋಮಣ್ಣನ ಬಗ್ಗೆ ನಾನು ಬರೆದ ಈ ಲೇಖನವನ್ನು ಬೆಂಗಳೂರು ಮಿರರ್ ಪತ್ರಿಕೆ ಪ್ರಕಟಿಸಲಿಲ್ಲ.
ಇದನ್ನು ನನ್ನ ಫೇಸಬುಕ್ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಜನರೇ ನೀಡಿದ `ಜನರಾಜ್ಯೋತ್ಸವ’ ಪ್ರಶಸ್ತಿ
------- ------
ಹೊತ್ತಾರೆ ಎದ್ದು ಹೆಗ್ಗಡದೇವನಕೋಟೆಯ ಅಡವಿಗಳಲ್ಲಿ ಅಲೆಯುವುದು ಎಂದರೆ ಪುಟ್ಟ ಹುಡುಗ ಸೋಮಣ್ಣನಿಗೆ ಬಲೆ ಖುಷಿ.
ಬೆಳಗ್ಗೆಯಿಂದ ಮರವೇರಿ, ನೀರಿನ ಝರಿಗಳಲ್ಲಿ ಆಟವಾಡಿ, ಚಿಟ್ಟೆಗಳ ಬೆನ್ನಟ್ಟಿದಾಗ, ಗಿಡದ ಬುಡದಲ್ಲಿ ಬಿದ್ದ ಬೇಲದ ಹಣ್ಣುಗಳನ್ನು ತಿಂದು ಹಸಿವು ಇಂಗಿಸಿಕೊಳ್ಳುತ್ತಿದ್ದ. ಇದು ಆ ಆದಿವಾಸಿ ಹುಡುಗನಿಗೆ ಮಾಮೂಲಾಗಿ ಹೋಗಿತ್ತು.
ಆದರೆ ಕೆಲ ದಿನಗಳ ನಂತರ ಅವನಿಗೆ ಅಡವಿಯಲ್ಲಿ ಬೇಲದ ಹಣ್ಣು ಸಿಗದೇ ಹೋಯಿತು. ಅವನು ಅದನ್ನು ಅರಸಲು ಬರುವುದಕ್ಕಿಂತ ಮುಂಚೆಯೇ ಯಾರೋ ಅವನ್ನು ಬಾಚಿಕೊಂಡು ಹೋಗಿರುತ್ತಿದ್ದರು.
ಪ್ರತಿದಿನ ತನ್ನ ತಿಂಡಿಯನ್ನು ಕದಿಯುವವರು ಯಾರೆಂದು ಅವನಿಗೆ ಕುತೂಹಲ ಹುಟ್ಟಿತು. ಒಂದು ಸಂಜೆ ಅಡವಿಗೆ ಹೋಗಿ ರಾತ್ರಿಯೆಲ್ಲ ಎಚ್ಚರವಾಗಿ ಕುಳಿತ. ಅಲ್ಲೊಬ್ಬ ಕಾಡಿನ ಬೇಲದ ಹಣ್ಣುಗಳನ್ನೆಲ್ಲ ಆಯ್ದು ದೂರದೂರಿನ ಮಾರುಕಟ್ಟೆಯಲ್ಲಿ ಮಾರಲು ಒಯ್ಯುತ್ತಿದ್ದನ್ನು ಕಂಡ. ಬಡ ಹುಡುಗನೊಬ್ಬನಿಗೆ ಪೌಷ್ಟಿಕ ತಿಂಡಿಯಾಗಿದ್ದ ಹಣ್ಣು ಇನ್ನೊಬ್ಬನಿಗೆ ಲಾಭದ ಸರಕಾಗಿತ್ತು.
ಈಗ ಅರವತ್ತರ ಆಸು ಪಾಸಿನಲ್ಲಿರುವ ಸೋಮಣ್ಣನಿಗೆ ಇತ್ತೀಚಿಗೆ ಇಂತಹದೇ ಒಂದು ಅನುಭವ ಆಗಿದೆ.
ಪ್ರತಿ ವರ್ಷ ರಾಜ್ಯ ಸರಕಾರ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಸೋಮಣ್ಣನ ಹೆಸರನ್ನು ಪರಿಗಣಿಸಲಾಗಿತ್ತು. ಅಕ್ಟೋಬರ್ ಕೊನೆಯ ವಾರದಲ್ಲಿ ತಯಾರು ಮಾಡಲಾಗುವ ಪಟ್ಟಿಯಲ್ಲಿಯೂ ಸಹ ಸೋಮಣ್ಣನ ಹೆಸರಿತ್ತು. ಸರಕಾರಿ ಅಧಿಕಾರಿಗಳು ಅವನ ಸ್ವ-ವಿವರಗಳನ್ನು ಪಡೆದುಕೊಂಡು ಹೋಗಿದ್ದರು.
ಆದಿವಾಸಿಗಳ ಹಕ್ಕಿಗಾಗಿ ಜೀವನವಿಡೀ ಹೋರಾಡಿದ ಸೋಮಣ್ಣನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬರುತ್ತಿರುವುದು ಎಂದು ಅವನ ಸಂಬಂಧಿಕರು, ಸ್ನೇಹಿತರು, ಹಿತ ಚಿಂತಕರು ಸಂಭ್ರಮಿಸಿದ್ದರು.
ಆದರೆ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾದಾಗ ಇವರಿಗೆಲ್ಲ ಆಘಾತವಾಗಿತ್ತು. ಸಹಜವಾಗಿಯೇ ಸಿಟ್ಟು ಬಂದಿತ್ತು.
ಆ ಪ್ರಶಸ್ತಿಗೆ ಸಂಪೂರ್ಣವಾಗಿ ಅರ್ಹವಾಗಿದ್ದ ಸೋಮಣ್ಣನಿಂದ ಆ ರಾಜ್ಯ ಮಟ್ಟದ ಗೌರವವನ್ನು ಪಟ್ಟಭದ್ರ ಹಿತಾಸಕ್ತಿಗಳು ಕಿತ್ತುಕೊಂಡಿದ್ದವು. ಬಾಲ್ಯದಲ್ಲಿ ಅವನಿಂದ ಬೇಲದ ಹಣ್ಣನ್ನು ಕಸಿದಂತೆ.
ಸರಕಾರ ಕೊಡದಿದ್ದರೇನಂತೆ ಸೋಮಣ್ಣನಿಗೆ ನಾವೇ ಪ್ರಶಸ್ತಿ ನೀಡೋಣ ಎಂದು ಕೆಲವು ಜನ ತಯಾರಾದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಜನಾಂಗ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎ. ಎಸ್ ಪ್ರಭಾಕರ ಅವರು ಸೋಮಣ್ಣನೊಂದಿಗೆ ಅನೇಕ ವರ್ಷ ಕೆಲಸ ಮಾಡಿದ್ದವರು. ಅವರು ಸೋಮಣ್ಣನ ಪರವಾಗಿ ಜನಾಂದೋಲನವೊಂದನ್ನೇ ಆರಂಭಿಸಿದರು. ಕೆಲವೇ ದಿನಗಳಲ್ಲಿ ನೂರಾರು ಸಾಹಿತಿಗಳು, ವಿದ್ವಾಂಸರು, ಹೋರಾಟಗಾರರು, ಅದರೊಂದಿಗೆ ಕೈಜೋಡಿಸಿದರು. ಸಂವೇದನಾ ರಹಿತ ರಾಜ್ಯ ಸರಕಾರವನ್ನು ದೂರುವುದಷ್ಟೇ ಅಲ್ಲದೇ, ಬಹಳ ದಿನ ನೆನಪಿನಲ್ಲಿ ಉಳಿಯುವಂತಹದ್ದೇನಾದರೂ ಮಾಡಬೇಕೆಂದು ಕೊಂಡು ತಯಾರಿ ಆರಂಭಿಸಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ತಪ್ಪಿ ಹೋದ ಸೋಮಣ್ಣನಿಗೆ ಜನರಿಂದ ನೀಡಲಾಗುವ `ಜನ ರಾಜ್ಯೋತ್ಸವ’ ಪ್ರಶಸ್ತಿ ನೀಡಬೇಕೆಂದು ನಿರ್ಧರಿಸಿದರು!
---- ----
ಸೋಮಣ್ಣ ಕಡುಬಡತನದಲ್ಲಿ ಬೆಳೆದವನು. ಅವನು ಶಾಲೆಯಲ್ಲಿ ನಾಲ್ಕನೆಯ ಈಯತ್ತೆ ಓದಿ ಮುಗಿಸುತ್ತಿದ್ದಂತೆಯೇ, ಅವನಪ್ಪ ಅಮ್ಮ ಅವನನ್ನು ದೊಡ್ಡ ಜಮೀನುದಾರರೊಬ್ಬರಲ್ಲಿ ಜೀತದಾಳಾಗಿ ಕೆಲಸಕ್ಕಿಟ್ಟರು. ರಾಜ್ಯ ಸರಕಾರದ 1976 ರ ಜೀತ ಪದ್ಧತಿ ನಿರ್ಮೂಲನಾ ಕಾಯಿದೆಯ ನಂತರ ಆತ
ಮುಕ್ತಿ ಪಡೆದ. ಆವಾಗ ಅವನಿಗೆ ಹೆಚ್ಚೆಂದರೆ 19 ವರ್ಷ. ತಾನೊಬ್ಬ ಸ್ವತಂತ್ರನಾಗಿದ್ದರೂ ತನ್ನ ಜನಾಂಗವೆಲ್ಲ ತುಂಬ ಕಷ್ಟದ, ಸಂಕಟದ ಜೀವನ ನಡೆಸುತ್ತಿದ್ದುದನ್ನು ಆತ ಅರಿತ.
ವಣ್ಯಜೀವಿ ರಕ್ಷಣಾ ಕಾಯಿದೆ (1972) ಯಿಂದಾಗಿ ನೂರಕ್ಕೂ ಹೆಚ್ಚು ಬುಡಕಟ್ಟು ಜನಾಂಗದ ಹಾಡಿಗಳನ್ನು ಕಾಡಿ ನಿಂದ ಹೊರ ಹಾಕಲ್ಪಟ್ಟಿದ್ದವು. ಸಾಲದೆಂಬಂತೆ, 1974 ರಲ್ಲಿ ಆರಂಭವಾದ ಕಬಿನಿ ಜಲಾಶಯ ಕಾಮಗಾರಿಯಿಂದಾಗಿ ವಿಶಾಲ ಅರಣ್ಯ ಪ್ರದೇಶ ಮುಳುಗಡೆ ಆಯಿತು.
ಇದೆಲ್ಲದರಿಂದಾಗಿ ಕೇವಲ ಅರಣ್ಯ ವೊಂದೇ ನಾಶವಾಗಲಿಲ್ಲ. ಅರಣ್ಯ ವಾಸಿಗಳ ಜೀವನ, ಸಂಸ್ಕೃತಿ, ಜನಪದ ಜ್ಞಾನ ಇವೆಲ್ಲವೂ ನಾಶ ಹೊಂದಿದವು. ಇದನ್ನು ನೋಡಿದ ಸೋಮಣ್ಣನಿಗೆ ತಡೆಯಲಾರದ ಸಂಕಟವಾಯಿತು.
ತನ್ನಂತೆಯೇ ತೊಂದರೆಗೊಳಗಾದ ಜೇನುಕುರುಬರು, ಕಾಡುಕುರುಬರು, ಯೆರವರು ಮುಂತಾದ ಬುಡಕಟ್ಟು ಜನಾಂಗದ ಜನರನ್ನು ಅವನು ಸಂಘಟಿಸತೊಡಗಿದೆ. ತನ್ನ ಕ್ರಿಯಾಶೀಲತೆಯಿಂದ ಅವರನ್ನು ಹುರಿದುಂಬಿಸಿದ. ತಮ್ಮ ಹಕ್ಕು ಗಳಿಗೆ ಹೋರಾಡುವಂತೆ ಅವರನ್ನು ಪ್ರೇರೇಪಿಸಿದ.
ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ನಡೆದ ಅವನ ಹೋರಾಟಕ್ಕೆ ರಾಜ್ಯ ಸರಕಾರ ಕೊನೆಗೂ ಮಣಿಯಲೇ ಬೇಕಾಯಿತು. ಭೂಹೀನ ಬುಡಕಟ್ಟು ಜನಾಂಗಗಳಿಗೆ ಸರಕಾರ ಆರು ಸಾವರಿ ಎಕರೆ ಜಮೀನು ಹಂಚಲು ನಿರ್ಧರಿಸಿತು.
ಕಬಿನಿ ಜಲಾಶಯದಿಂದ ನಿರ್ವಸಿತರಾದ ಅನೇಕ ಆದಿವಾಸಿಗಳು ಕಾಡಿನ ಹೊರಗಿನ ಬದುಕಿಗೆ ಹೊಂದಿಕೊಳ್ಳುತ್ತಿದ್ದಿಲ್ಲ. ಅವರನ್ನು ಸರಕಾರಿ ಅಧಿಕಾರಿಗಳು ಸರಿಯಾಗಿ ಮರುವಸತಿಗೊಳಿಸದೇ ಇದ್ದುದರಿಂದ ಅವರು ನೀರಿನಿಂದ ತೆಗೆದೆಸೆದ ಮೀನಿನಂತೆ ತಟಕ್ಕನೇ ಸಾಯುತ್ತಿದ್ದರು. ಸೋಮಣ್ಣನ ಹೋರಾಟದಿಂದ ಸರಕಾರಿ ಸೌಲಭ್ಯಗಳು ಕೇವಲ ಕಾಗದದ ಮೇಲೆ ಉಳಿಯದೇ ಅವರ ಅವಶ್ಯಕತೆಗೆ ತಕ್ಕಂತೆ ಅವರಿಗೆ ಸಿಗುವಂತಾಯಿತು.
ಕೆಲವು ಸೇವಾ ಸಂಸ್ಥೆಗಳ ಜೊತೆಗೂಡಿ ಸೋಮಣ್ಣ ನಾಗರಹೊಳೆ ರಾಷ್ಟ್ರೀಯ ಉದ್ಯಾನ ದಿಂದ ನಿರ್ವಸಿತರಾದ ಬುಡಕಟ್ಟು ಜನಾಂಗದ ಹಕ್ಕುಗಳಿಗಾಗಿ ಹೋರಾಡಿದ. ಸೋಮಣ್ಣ ಹಾಗೂ ಇತರರು ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದರಿಂದಾಗಿ ಕರ್ನಾಟಕ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪನ್ನುನೀಡಿತು. ಅರಣ್ಯ ವಾಸಿಗಳ ಪುನರ್ವಸತಿ ಯ ಸಮಸ್ಯೆಗಳನ್ನು ಅಧ್ಯಯನ ನಡೆಸಲು
ಮೈಸೂರು ವಿಶ್ವವಿದ್ಯಾಲಯದ ರಾಜ್ಯ ಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ. ಮುಜಫರ್ ಅಸ್ಸಾದಿ ಅವರ ನೇತ್ರತ್ವದಲ್ಲಿ ಸಮಿತಿಯೊಂದು ನೇಮಕವಾಯಿತು.

ಎರಡು ವರ್ಷಗಳ ಹಿಂದೆ ಪ್ರೊ. ಅಸಾದಿ ಸಮಿತಿ 130 ಪುಟಗಳ ಮಧ್ಯಂತರ ವರದಿಯೊಂದನ್ನು ರಾಜ್ಯ ಸರಕಾರಕ್ಕೆ ನೀಡಿತು. ಮೈಸೂರು ಹಾಗೂ ಕೊಡಗು ಜಿಲ್ಲೆಗಳ ಮೂರು ತಾಲುಕು ಗಳಲ್ಲಿ ಹಬ್ಬಿರುವ ನಾಗರಹೊಳೆಯ ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನ ದಿಂದ ಹೊರದಬ್ಬಲಾದ ಬುಡಕಟ್ಟು ಜನರು ಭೂಹೀನ ಕಾರ್ಮಿಕರಾಗಿ ಕಡುಬಡತನದಲ್ಲಿ ಜೀವಿಸುತ್ತಿರುವುದನ್ನು ಅದು ಉಲ್ಲೇಖಿಸಿತು. ಪರಿಸ್ಥಿತಿ ಸುಧಾರಿಸಲು 36 ಅಂಶದ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಅದು ಸರಕಾರಕ್ಕೆ ಶಿಫಾರಸು ಮಾಡಿತು. ಆ ದಿಕ್ಕಿನಲ್ಲಿ ಸರಕಾರವಿನ್ನೂ ಕ್ರಮ ಕೈಗೊಂಡಿಲ್ಲ.

ನಾಗರಹೊಳೆ ಅರಣ್ಯದ ಮಧ್ಯದಲ್ಲಿ ತಾಜ್ ಹೋಟೆಲ್ ಸಮೂಹ ವೈಭವೋಪೇತ ಪಂಚತಾರಾ ರಿಸಾರ್ಟ್ (ಗಿರಿಧಾಮ) ಒಂದನ್ನು ಕಟ್ಟಲು ತಯಾರಿ ನಡೆಸಿತು. ಇದನ್ನು ನಿಲ್ಲಿಸಿದ್ದು ಸಹ ಸೋಮಣ್ಣನ ಸಾಧನೆಗಳಲ್ಲಿ ಒಂದು.

ಕಾಲಾಂತರದಲ್ಲಿ ಕಾಡಿನಲ್ಲಿಯೇ ಹುಟ್ಟಿ ಜೀವ ಕಳೆದ ಬುಡಕಟ್ಟು ಜನರಿಗೇ ರಕ್ಷಿತ ಅರಣ್ಯದಲ್ಲಿ ಇರಲು ಹಕ್ಕಿಲ್ಲ ವೆಂದ ಮೇಲೆ ಹೊರಗಿನಿಂದ ಬಂದ ಶ್ರೀಮಂತರಿಗೆ ದಟ್ಟಡವಿಯಲ್ಲಿ ಮಜಾ ಉಡಾಯಿಸುವ ಹಕ್ಕೆಲ್ಲಿಂದ ಬಂತು ಎಂಬ ಸರಳ ತರ್ಕದ ಮೇಲೆ ನಿಂತ ಸೋಮಣ್ಣನ ವಾದವನ್ನು ನ್ಯಾಯಾಲಯ ಎತ್ತಿ ಹಿಡಿಯಿತು.

ಸೋಮಣ್ಣ ಎಷ್ಟು ನಿರ್ಮಲ ಮನಸ್ಸಿನ ಮನುಷ್ಯ ನೆನ್ನುವುದಕ್ಕೆ ಒಂದು ಉದಾಹರಣೆ. ಅವನಿಗೆ ರಾಜ್ಯೋತ್ಸವ ಪ್ರಶಸ್ತಿ ಬರದೇ ಹೋದಾಗ ಅವನ ಸುತ್ತ ಮುತ್ತಲಿನವರು ತುಂಬ ಬೇಜಾರು ಮಾಡಿಕೊಂಡರು. ಅಯ್ಯೋ ಪರವಾಗಿಲ್ಲ. ಪ್ರಶಸ್ತಿ ಬರದಿದ್ದರೆ ಇಲ್ಲ, ಎಂದು ಅವರನ್ನು ಸೋಮಣ್ಣನೇ ಸಮಾಧಾನ ಗೊಳಿಸಿದನೇ ಹೊರತು ಅವರು ಇವನನ್ನು ಸಮಾಧಾನ ಮಾಡುವ ಪರಿಸ್ಥಿತಿ ಬರಲಿಲ್ಲ.

ಆದ್ದರಿಂದಲೇ ಕಳೆದ ಶನಿವಾರ ರಾಜ್ಯದ ಇಕ್ಕೆಲಗಳಿಂದ ಬಂದ ನೂರಾರು ಜನ ಹೆಗ್ಗಡದೇವನ ಕೋಟೆಯ ಮೊಟ್ಟಾ ಹಾಡಿಯಲ್ಲಿ ಸೋಮಣ್ಣನನ್ನು ಅಭಿನಂದಿಸಲು ಸೇರಿದ್ದರು.  ಅವನ ಜೀವನ ಹಾಗೂ ಹೋರಾಟವನ್ನು ನೆನೆದು ಸಂಭ್ರಮಿಸಿದರು.
ಹಿರಿಯ ಲೇಖಕರೂ, ಬುದ್ಧಿಜೀವಿಯೂ ಆದ ದೇವನೂರು ಮಹಾದೇವ ಅವರು ಈ ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರನಿಗೆ `ಜನ ರಾಜ್ಯೋತ್ಸವ’ ಪ್ರಶಸ್ತಿ ನೀಡಿ ಗೌರವಿಸಿದರು. ರಾಜ್ಯ ಸರಕಾರದ ಪ್ರಶಸ್ತಿ ಒಂದು ಲಕ್ಷ ರೂಪಾಯಿ ಮೊತ್ತದ್ದು, ಅಲ್ಲವೇ, ಆದ್ದರಿಂದ ಸೋಮಣ್ಣನಿಗೆ ಒಂದು ಲಕ್ಷದಾ ಒಂದು ರೂಪಾಯಿಯ ಮೊತ್ತ ನೀಡಲಾಯಿತು.
ಈ ದುಡ್ಡು ರಾಜ್ಯದೆಲ್ಲೆಡೆಯ ಸೋಮಣ್ಣನ ಹಿತ ಚಿಂತಕರು, ಅಭಿಮಾನಿಗಳಿಂದ ಸಂಗ್ರಹಿಸಿದ್ದು. ಹೀಗಾಗಿಯೇ ಇದು ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿ ಜನ ಸಾಮಾನ್ಯರ ಹಣದಿಂದ 
ಕೊಡಮಾಡಲಾದ `ಜನರಾಜ್ಯೋತ್ಸವ’ ಪ್ರಶಸ್ತಿ.

 ಸದಾ ಹಸನ್ಮುಖಿಯಾಗಿ, ಲವಲವಿಕೆಯಿಂದ ಇರುವ ಸೋಮಣ್ಣ ತನ್ನ ಸುತ್ತಲಿನ ನಿಸರ್ಗದೊಂದಿಗೆ ಸೌಹಾರ್ದತೆಯಿಂದ ಇರುವವನು. ಕಾಡಿನ ಸಹಜ ಲಯದೊಡನೆ ಅವನ ಜೀವನ ಬೆಸೆದು ಹೋಗಿದೆ. ಅವನ ಬದುಕು ಬುಡಕಟ್ಟು ಜನರ ಸಹಜ ಸೌಂದರ್ಯದ ಪ್ರತಿರೂಪ. ಕಾಡಿನ ಜನರ ಜಾನಪದ ಜ್ಞಾನ, ಜನ ಸಾಮಾನ್ಯರ ಅರಿವಿನಾಚೆ ಇರುವ ಅಡವಿಯ ನಿಗೂಢ ನಿಧಿಗಳ ಬಗ್ಗೆ ಅವನಿಗೆ ಅಪಾರ ತಿಳುವಳಿಕೆ ಇದೆ. ಸುತ್ತ ಮುತ್ತಲ ಗಿಡ ಗಂಟಿಗಳಲ್ಲಿ ದೊರೆಯುವ ಎಲೆ ಕಾಯಿಗಳ ಔಷಧೀಯ ಗುಣಗಳ ಬಗ್ಗೆ ಅವನ ಅರಿವು ಅಪರಿಮಿತ.
ಪ್ರಭುತ್ವ ನೀಡುವ ಗೌರವಾದರಗಳ ಹಿಂದೆ ನಡೆಯುವ ರಾಜಕೀಯಕ್ಕೆ ಇಂತಹ ಅಪೂರ್ವ ಮನುಷ್ಯನಿಗೆ ಸರಕಾರದ ಮನ್ನಣೆ ದೊರಕದೇ ಹೋದದ್ದು ಒಂದು ನಿದರ್ಶನ.

--- ಗೌರಿ ಲಂಕೇಶ್

Comments

Popular posts from this blog

Mahamud Gawan

ವೃತ್ತಿ –ಉದ್ದಿಮೆ- ಪತ್ರಕರ್ತ

Literature in Bidar