ವೃತ್ತಿ –ಉದ್ದಿಮೆ- ಪತ್ರಕರ್ತ


ವೃತ್ತಿ –ಉದ್ದಿಮೆ- ಪತ್ರಕರ್ತ
- ಮೊನಾಲಿಸಾದಂತಹ ಖ್ಯಾತ ಕೃತಿಗಳನ್ನು ಜಗತ್ತಿನೆಲ್ಲೆಡೆಗಳಿಂದ ಆರಿಸಿ ತಂದಿಟ್ಟುಕೊಂಡು, ಪ್ರವಾಸಿಗಳಿಗೆ ಟಿಕೀಟು ಹಚ್ಚಿ ತೋರಿಸುವುದು, `` ವಾರೆವಾ! ಇವರನ್ನು ನೋಡಿ ಕಲಿಯಬೇಕಪ್ಪಾ’’’ ಎನ್ನುವಷ್ಟರ ಮಟ್ಟಿನ ಭಾಷಾಭಿಮಾನ ಹಾಗೂ ಬಿರುಬಿಸಿಲಿನಲ್ಲಿಯೂ ಹಿತವಾದ ಚಳಿ ಆಗುವಂತ ಹರೆಯದವರ ಪ್ರೇಮ  ಪ್ರಕರಣಗಳೂ, ಹಾಗೂ ಪಾಕಶಾಸ್ತ್ರ ವನ್ನು ಒಂದು ಮಹಾನ್ ಕಲೆಯ ಮಟ್ಟಕ್ಕೆ ಬೆಳೆಸಿದ್ದು. ಫ್ರಾನ್ಸು ಯಾಕಪ್ಪಾ ಫೇಮಸ್ ಎಂದರೆ ಈ ಕೆಲವಕ್ಕೆ. ಈಗ ಭಾರತದಲ್ಲಿ ಫ್ರಾನ್ಸಿನ ಯುದ್ಧಕಲೆವೂ ಫೇಮಸ್ಸಾಗುತ್ತಿದೆ. ಆ ಮಾತು ಈಗ ಬೇಡ.
ಪಾಕಶಾಸ್ತ್ರವನ್ನು ಕಲಿಯಲೆಂದೇ ವಿಶ್ವದ ಅನೇಕ ಕಡೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿರುವುದು ಆ ದೇಶದ ಹಿರಿಮೆ.
ಅಡುಗೆ ಮಾಡುವುದು, ಅಡುಗೆಯನ್ನು, ಬಾಣಸಿಗ (ಶೆಫ್) ರನ್ನು ಆರಾಧಿಸುವುದು, ಆ ಕಲೆಯನ್ನು ಕಲಿಯುವುದು, ಕಲಿಸುವುದು, ಅಲ್ಲಿನ ಸುಸಂಪ್ರದಾಯಗಳಲ್ಲಿ  ಕೆಲವು. ಅಲ್ಲಿ ಅಡುಗೆ ಸಾಹಿತ್ಯದ ಪುಸ್ತಕಗಳು ಇವೆ, ಅಡುಗೆ ಆಧಾರಿತ ಕತೆ, ಕಾವ್ಯ, ಸಿನೆಮಾ, ಇವೆ. ಅಡುಗೆ ಅಲ್ಲಿನ ನುಡಿಗಟ್ಟನ್ನು ಬೆಳೆಸಿದೆ, ಬದಲಾಯಿಸಿದೆ, ಹೊಸ ಶಬ್ದಗಳನ್ನು ಫ್ರೆಂಚ್ ಭಾಷೆಗೆ ಸೇರಿಸಿದೆ.
ಆದರೆ ಅದಕ್ಕೆ ಸಂಬಂಧ ಪಟ್ಟಂತೆ ಕೆಲವು ಜೋಕುಗಳೂ ಚಾಲ್ತಿ ಯಲ್ಲಿವೆ.
-        ``ಪಂಚತಾರಾ ಅಡುಗೆ ಮಾಡುವವರ ಬಗ್ಗೆ ಫ್ರಾನ್ಸಿನಲ್ಲಿ ಒಂದು ಮಾತು ಇದೆ. ಅಡುಗೆ ಮಾಡುವುದೇನೂ ಅಸಾಧ್ಯ ಕಲೆಯಲ್ಲ, ಅದರ ಹಿಂದೆ ಅಗಣಿತ ರಹಸ್ಯಗಳೇನೂ ಇಲ್ಲ. ಒಬ್ಬರು ಥಟ್ಟಂತ ಮಾಡಿ ಮುಗಿಸಬಹುದಾದ ಕೆಲಸವನ್ನು ಅನೇಕ ಮಧ್ಯ ವಯಸ್ಕ ಗಂಡಸರು ಸೇರಿಕೊಂಡು ಗಂಟೆಗಟ್ಟಲೇ ವ್ಯಯಿಸಿ ಅದೇನೋ ದೊಡ್ಡ ರಹಸ್ಯವೆನ್ನುವಂತೆ ಮಾಡಿಬಿಟ್ಟಿದ್ದಾರೆ’’’
-        ``ಫ್ರಾನ್ಸಿನ ಇತಿಹಾಸ ಹುಟ್ಟಿದ್ದು ಇಬ್ಬರಿಂದ. ಯುದ್ಧಕ್ಕೆ ಹೋದ ಹುಡುಗ ಹಾಗೂ ಸೇನೆಗೆ ಸೇರದೇ ಬಾಣಸಿಗನಾದ ಅವನ ಅಣ್ಣನಿಂದ’’.
-        ``ಒಂದೂರಿನಲ್ಲಿ ಒಬ್ಬ ಶೆಫ್ ಇದ್ದಾಗಲೇ ಮಜಾ. ಎಲ್ಲರೂ ಶೆಫ್ ಗಳಾಗಿ ಬಿಟ್ಟರೆ ಏನು ಗತಿ? ಆಗ ಪಾಕಶಾಸ್ತ್ರದ ಪುಸ್ತಕಗಳು ಇದ್ದರೇನು ಬಿಟ್ಟರೇನು,’’ ಇತ್ಯಾದಿ.
ಸಾಮಾಜಿಕ ಮಾಧ್ಯಮ ವೆಂಬೋ ಸೋಷಿಯಲ್ ಮೀಡಿಯಾದ ಅತಿ ಉಪಯೋಗದಿಂದ ನಮ್ಮ ಶ್ರೀಸಾಮಾನ್ಯ ನಲುಗಿಹೋಗಿರುವ ಈ ಕಾಲದಲ್ಲಿ ಫ್ರಾನ್ಸಿನ ಪಾಕ ಕಲೆಯ ಜೋಕುಗಳೆ‍ಲ್ಲ ಭಾರತದ ಪತ್ರಿಕೋದ್ಯಮ ದ ಬಗ್ಗೆಯೇ ಇರಬಹುದೇ ಎಂಬ ಗುಮಾನಿ ಹುಟ್ಟಿಸುತ್ತಿವೆ.  
ರಾಜಕೀಯ ಪಕ್ಷಗಳು ತಾವು ಅಧಿಕಾರಕ್ಕೆ ಬರಲು, ಅಧಿಕಾರದಲ್ಲಿ ಇರಲು ಹಾಗೂ ತಾವು ಮಾಡಿದ್ದೆಲ್ಲವನ್ನು ಸರಿಗಟ್ಟಿಕೊಳ್ಳಲು ಜನಾಭಿಪ್ರಾಯ ರೂಪಿಸಬೇಕೆಂದು ಸ್ಥಾಪಿತ
ಮಾಧ್ಯಮಗಳನ್ನೂ ಹಾಗೂ ನವ ಮಾಧ್ಯಮಗಳಾದ ಸೋಷಿಯಲ್ ಮೀಡಿಯಾ ಗಳನ್ನು ಬಳಸುತ್ತಿರುವುದು ಹಾಗೂ ಅದರಿಂದ ಅಸಂಖ್ಯ ಹಿರಿ- ಕಿರಿ ವಯಸ್ಸಿನ ಮತದಾರರನ್ನು ಸೃಷ್ಟಿಸುತ್ತಿರುವುದು ಹಾಗೂ ದೇಶದ 400 ಪಕ್ಷಗಳು ಪೈಪೋಟಿಗೆ ಬಿದ್ದು ಒಬ್ಬರು ತಪ್ಪು ಮಾಡಿದಾಗ ಎತ್ತಿ ತೋರಿಸದೇ ಇತರಿರಿಗಿಂತ ದೊಡ್ಡ ತಪ್ಪು ಗಳನ್ನು ಮಾಡುವುದು ನನಗೆ  ಒಂದೊಂದು ಸಾರಿ ಚಿಂತೆಗೆ ಈಡು ಮಾಡಿದರೆ, ಇನ್ನೊಮ್ಮೆ ದೊಡ್ಡ ಜೋಕ್ ಎನ್ನಿಸುತ್ತದೆ.

ಕೊನೆಯ ಜೋಕಿನಿಂದ ಶುರು ಮಾಡೋಣ. ಸೋಷಿಯಲ್ ಮೀಡಿಯಾ ಶೂರರು ಸೃಜಿಸಿದ ಸುದ್ದಿಗಳಿಂದಲೇ ಭೂಮಂಡಲ ತುಂಬಿಹೋದಾಗ ಸುದ್ದಿಗಾರರನ್ನು ಕೇಳುವವರಾರು? ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಸುದ್ದಿ ಬರೆಯುವವರನ್ನು ಸ್ಥಾಪಿತ ಮಾಧ್ಯಮಗಳಲ್ಲಿ ಪೋಷಿಸುತ್ತಾ ಬಂದಿರುವುದು ಹಳೆಯ ಸುದ್ದಿ. ಆದರೆ ತಮಗೆ ಬೇಕಾದಂತಹ ವದಂತಿಗಳಿಗೆ ಸುದ್ದಿಯ ಸ್ಥರಕ್ಕೆ ಎತ್ತರಿಸಲು ನವ ವರದಿಗಾರರ ವೃಂದವನ್ನೇ ಹುಟ್ಟಿಸಿರುವುದು ಹಳೆಯ ಸುದ್ದಿಯನ್ನು ಬ್ರೇಕ್ ಮಾಡಿದ ಹೊಸ ಸುದ್ದಿ.

ಕೇವಲ ಹತ್ತು ವರ್ಷಗಳಿಂದೀಚೆಗೆ ಹುಟ್ಟಿಕೊಂಡ ಇದೊಂದು ಈಗ ಬೃಹತ್ ಕೈಗಾರಿಕೆಯ ಮಟ್ಟಕ್ಕೆ ಬೆಳೆದಿದೆ. ಸುಳ್ಳು ಸುದ್ದಿ ಸೃಜಿಸಲು, ಕೆಲವರ ಬಗ್ಗೆ ದುರಭಿಪ್ರಾಯ, ಇತರರ ಬಗ್ಗೆ ಸದಭಿಪ್ರಾಯ ರೂಪಿಸಲು, ಇತಿಹಾಸ ತಿರುಚಲು, ಮಾಹಿತಿ ತಿದ್ದಿ ಜನರ ತಲೆ ತಿರುಗಿಸಲು ದೊಡ್ಡ ಸಂಖ್ಯೆಯಲ್ಲಿ ಯುವಜನರನ್ನು ಸಂಬಳ ಸಮೇತ ಕೆಲಸಕ್ಕೆ ಸೇರಿಸಲಾಗುತ್ತಿದೆ. ಈ ಪಗಡೆ ಆಟದಲ್ಲಿ ಮೊದಲು ದಾಳ ಉರುಳಿಸಿದವರು ಬಿಜೆಪಿಯವರಾದ್ದರಿಂದ ಅವರ ಕೈ ಮೇಲೆ ಇದೆ. ಇತರ ಪಕ್ಷದವರು ಅವರ ಬೆನ್ನು ಹತ್ತಿದ್ದರಿಂದ ಅವರ ಕಾಯಿಗಳು ಪಟದ ಹಿಂದಿನ ಚೌಕಗಳಲ್ಲಿ ಉಳಿದು ಸಮಾಧಾನ ಪಡಬೇಕಾಗಿದೆ. ಬಡ ಭಾರತೀಯ ನ ಪರಿಸ್ಥಿತಿ ಮಾತ್ರ ಬೇಂದ್ರೆ ಹೇಳಿದಂತೆ `ಹೊಟ್ಟೆಯು ಹತ್ತಿತು ಬೆನ್ನಿನ ಬೆನ್ನು’ ಎನ್ನುವಂತಾಗಿದೆ.

`ಟ್ರೋಲ್’ ಎನ್ನುವುದು ಸ್ಕ್ಯಾಂಡಿನೇವಿನನ್ ದೇಶಗಳ ಜಾನಪದ ಕತೆ ಗಳಲ್ಲಿ ಬರುವ ಪಾತ್ರ. ಇದರ ಅರ್ಥ ಕ್ರೂರ ಮನೋಭಾವದ, ತನ್ನ ದೇ ಸರಿಯೆಂದು ವಾದಿಸುವ, ಅಸಾಧಾರಣ ರೂಪ ಹಾಗೂ ಶಕ್ತಿ ಹೊಂದಿದ, ಗುಹೆ ಗಳಲ್ಲಿ ವಾಸಿಸುವ, ಬೇಟೆ ಯಾಡಿ ಬದುಕುವ ಗಂಡಸು ಎಂದು. ಆಧುನಿಕ ಯುಗದಲ್ಲಿನ ಟ್ರೊಲ್ ಗಳು ವಾತಾನುಕೂಲಿತ ಕಚೇರಿಗಳ ಪ್ಲೈವುಡ್ ಕ್ಯೂಬಿಕಲ್ ಗಳಲ್ಲಿ ಕೂತು ಜನಮತ ರೂಪಿಸುವ
ಮಸಲತ್ತು ಮಾಡುತ್ತಿರುವಂತೆ ಕಾಣುತ್ತಿದೆ. ಸ್ವಾತಿ ಚತುರ್ವೇದಿ ಹಾಗೂ ಡೇವಿಡ್ ಪೈನ್ ಅವರು ಬರೆದ ಪುಸ್ತಕಗಳು ಈ ರೀತಿಯ ರಾಜಕೀಯ ಟ್ರೋಲ್ ಸೈನ್ಯಗಳ ಕತೆ ಯನ್ನು ಹಿಂಜಿಟ್ಟಿವೆ.
ಇವರು ಎಂದೋ ನಡೆದು ಹೋದ ಯುದ್ಧ ದ ಕತೆಯನ್ನು ಬದಲಿಸಿ, ಅದು ಇಂದಿಗೆ ಅನ್ವಯ ವಾಗುತ್ತದೆ ಎನ್ನುವಂತೆ ವಾದಿಸುತ್ತಿದ್ದಾರೆ. ಯಾವುದೋ ಪ್ರದೇಶಗಳಲ್ಲಿ ನಡೆದ ವಿದ್ಯಮಾನಗಳು ಅಖಂಡ ಭಾರತದ ಎಲ್ಲ ಪ್ರದೇಶದ ಜನರ ಬದುಕನ್ನು ಪ್ರಭಾವಿಸುತ್ತವೆ ಎನ್ನುವಂತೆ ತಿರುಚುತ್ತಿದ್ದಾರೆ.
ಹಿಂದೆ ನೂರಾರ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು, ವೀರಾವೇಶದಿಂದ ಹೋರಾಡಿ ಯುದ್ಧವೊಂದನ್ನು ಗೆದ್ದಿರುತ್ತಾರೆ ಅಥವಾ ವೀರ ಮರಣ ಹೊಂದಿರುತ್ತಾರೆ. ಅವರಿಗಿಂತಲೂ ಹೆಚ್ಚು ವೀರಾವೇಶದಿಂದ ಕಾದಾಡಿ, ಅದರ ಇತಿಹಾಸ ವನ್ನು ಬದಲಿಸಿ, ಅವತ್ತು ಹೀಗಾಯಿತು, ಅದರಿಂದಾಗಿಯೇ ಇವತ್ತು ಹೀಗಾಗಲಿದೆ ಎಂದು ನಮ್ಮ ಕಿವಿಯೂದುತ್ತಿದ್ದಾರೆ.
ಯಾವುದೋ ಘನ ಘೋರ ಸುಳ್ಳನ್ನು ಸತ್ಯ ಶೋಧಕ ಸಮಿತಿಯ ಸಂಶೋಧಕರಿಂದ ಕಂಡೊಕೊಳ್ಳಲ್ಪಟ್ಟ ಸತ್ಯ ವೆಂದು ಇಂದು ಬಿಂಬಿಸಲಾಗುತ್ತಿದೆ. ಅದರ ಹುಳುಕು ಗಳನ್ನು ಎತ್ತಿ ತೋರಿಸಿದವರಿಗೆ ದೇಶವಿರೋಧಿ ಪಟ್ಟ ಕಟ್ಟಲಾಗುತ್ತಿದೆ.

``ಅಧಿಕಾರಸ್ಥರ ಕಣ್ಣಲ್ಲಿ ಕಣ್ಣಿಟ್ಟು ನಿಜ ನುಡಿಯುವವನೇ ನಿಜವಾದ ಧೈರ್ಯವಂತ’’ ಎಂದವನು ಅಮೇರಿಕೆಯಲ್ಲಿ ಮಾನವ ಹಕ್ಕು ಗಳಿಗಾಗಿ ಹೋರಾಡಿದ  ಕರಿಯರ ನಾಯಕ ಬೇಯಾರ್ಡ್ ರಸ್ಟಿನ್. ಇವನನ್ನು ನಂಬಿಕೊಂಡು ಸತ್ಯ ಹೇಳುವ ಪತ್ರಕರ್ತರಿಗೆ ಅಮೇರಿಕೆಯ ಮತ್ತೊಬ್ಬ ಕರಿಯರ ನಾಯಕ ಮಾರ್ಟಿನ್ ಲೂಥರ್ ಕಿಂಗ್ ನ ಗತಿ ಕಾಣಿಸಲಾಗುತ್ತಿದೆ.

ರಾಜಕೀಯ ಪಕ್ಷಗಳು, ಅವುಗಳ ಪಟ್ಟಭದ್ರ ಹಿತಾಸಕ್ತಿಗಳು, ಅವುಗಳ ಬೆಂಬಲಿಗರ ಪ್ರಕಾರ ನಿಜವಾದ ಪತ್ರಕರ್ತರಿಗೆ ಯಾರದಾದರೂ ಪರವಾದ ಅಥವಾ ವಿರುದ್ಧವಾದ ಅಭಿಪ್ರಾಯ ವಿರಲೇಬೇಕು. ಇತರರ ಮನಸ್ಸಿನ ಒಳಹೊಕ್ಕು ಅವರ ಅಭಿಪ್ರಾಯವನ್ನು ಕಾಲಕ್ಕೆ ತಕ್ಕಂತೆ, ತಮಗೆ ಬೇಕಾದಹಾಗೆ ಬದಲಾಯಿಸುವ ಪ್ರತಿಭೆ ಇರಬೇಕು. ತಾವು ಬರೆಯುತ್ತಿರುವ ವಿಷಯದ ಬಗ್ಗೆ ತಳಸ್ಪರ್ಷಿಯಾದ ಜ್ಞಾನ, ಅಧ್ಯಯನ ಅಥವಾ
ಮಾಹಿತಿ ಇರಬೇಕಂತೇನೂ ಇಲ್ಲ.

ಹೊಸ ಪತ್ರಕರ್ತರ ಭಾನಗಡಿಗಳನ್ನು ನೋಡುತ್ತಿದ್ದಾಗ ಹಳೆಯ ಪತ್ರಕರ್ತರು ಮಾಡಿದ ಘನಂದಾರಿ ಕೆಲಸಗಳನ್ನು ಮರೆತು ಬಿಡಬೇಕಿಲ್ಲ. ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತು ಹಲವು ದಶಕಗಳಿಂದ ಸುಳ್ಳು ಸುದ್ದಿಯ ಸೂಲಗಿತ್ತಿಯರಾಗಿ ಇರುವವರೇನು ಕಮ್ಮಿ ಇಲ್ಲ. ಇವರಿಂದ ಜನಸತ್ತೆಯ ವಿಕಾಸಕ್ಕೆ ಆದ ಅಡೆತಡೆ ದೊಡ್ಡವು. ಇಂತಹ ಕೆಲಸಗಳು ವ್ಯವಸ್ಥಿತವಾಗಿ ನಡೆದ್ದರಿಂದಾಗಿಯೇ ಸಾವಿರಾರು ಜನ ನೂರಾರು ವರ್ಷಗಳ ಹೋರಾಟ- ಬಲಿದಾನಗಳಿಂದ ಸ್ವಾತಂತ್ರ್ಯ ಪಡೆದ ದೇಶ ಪ್ರಬುದ್ಧ ಜನಸತ್ತೆಯಾಗಿ ಬೆಳೆಯಲು ತಡವಾಗಿದೆ.

ಅಂತೆಯೇ, ಈ ನವ ಮಾಧ್ಯಮದ ಮಾಯಾ ಮೋಡಿ ಹಳಬರನ್ನೂ ಬಿಟ್ಟಿಲ್ಲ. ಕಸಬುದಾರ ಪತ್ರಕರ್ತರೂ ಕೂಡ ಇದರ ಮತ್ತಿಗೆ ಒಳಗಾಗಿ ಈ ನಕಲಿ ಸುದ್ದಿಗಳ ಸತ್ಯಾ ಸತ್ಯತೆ ಪರೀಕ್ಷಿಸದೇ ಫಾರ್ವಡ್ ಮಾಡುತ್ತಿದ್ದಾರೆ. ಹೃದಯ ಪೂರ್ವಕ ವಾಗಿ ನಂಬುತ್ತಿದ್ದಾರೆ, ಅವುಗಳೇ ಸತ್ಯ ಎಂದು ಇತರರೆದುರು ಘೋಷಿಸುತ್ತಿದ್ದಾರೆ. `ಸವಣೂರು ನವಾಬನ ಆಸ್ತಿಗಾಗಿ ಅಣ್ಣ – ತಮ್ಮ ಬೇರೆಯಾದರು’ ಎನ್ನುವ ಗಾದೆ ಮಾತಿನಂತೆ ಯಾವನೋ ಪುಣ್ಯಾತ್ಯನ ಮೂಗು ಎಷ್ಟು ಚೂಪಾಗಿದೆ ಎನ್ನುವಂತಹ ಕ್ಷುಲ್ಲಕ ವಿಷಯಗಳಿಗೆ ದಶಕಗಳ ಸಿಹಿ ಸಂಬಂಧ ಕೆಡಿಸಿಕೊಳ್ಳುತ್ತಿದ್ದಾರೆ.

ಆದರೆ ಇಂದಿನ ಹುಡುಗ ಹುಡುಗಿಯರಿಗೆ ಕಾಗದದ ಮೇಲಿನ ಪ್ರೀತಿ ಕಮ್ಮಿಯಾಗಿದೆ. ಗೊರಿಲ್ಲಾ ಗ್ಲಾಸು ಯುಕ್ತ ಮೊಬೈಲ್ ಪರದೆಗಳೇ ಅವರನ್ನು ಪ್ರೇಮ ಪಂಜರದಲ್ಲಿ ಬಂಧಿಸಿಡುತ್ತಿವೆ. ಈ ಹಿನ್ನೆಲೆಯಲ್ಲಿ ನವ ಮಾಧ್ಯಮಗಳು ಹಿಂದೆಂದೂ ಇಲ್ಲದ ಪ್ರಾಮುಖ್ಯತೆ ಪಡೆಯುತ್ತಿವೆ.  ಇವುಗಳ ಭರಾಟೆಯಲ್ಲಿ ಸುದ್ದಿ ಎಂದರೇನು, ಸುದ್ದಿಗಾರರು ಎಂದರೇನು, ಸುದ್ದಿ ಮಾಧ್ಯಮ ವೆಂದರೇನು, ಪತ್ರಿಕೋದ್ಯಮ ವೆಂದರೇನು ಎನ್ನುವ ಪ್ರಶ್ನೆಗಳ ಉತ್ತರಗಳನ್ನು ಹೊಸದಾಗಿ ಹುಡುಕಬೇಕಾಗುತ್ತಿದೆ.
ಹೆಣ್ಣು, ಮಣ್ಣು ಹಾಗೂ ಹೊನ್ನಕ್ಕಾಗಿ ಯುದ್ಧಗಳಾಗುತ್ತಿವೆ ಎನ್ನುವುದು ಹಳೆಯ ಗಾದೆ. ಯುದ್ಧಗಳ ನೈಜ ಕಾರಣ ವೆಂದರೆ ಮಾಹಿತಿ ಹಾಗೂ ಅಭಿಪ್ರಾಯ ನಿರ್ಮಾಣ ಎನ್ನುವುದು ಹೊಸ ಗಾದೆ. ಈ ಕಾರಣದಿಂದಾಯೂ ಕೂಡ ಈ ಸುದ್ದಿಕೋರರ ದಂಡನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.

ನಾವು ಚಿಕ್ಕವರಿದ್ದಾಗ ನಮ್ಮೂರಿನಲ್ಲಿ ನೀಲಗೆಟ್ಟ ಸುದ್ದಿ ಎಂಬ ಮಾತು ಕೇಳಿ ಬರುತ್ತಿತ್ತು. ಯಾರದಾದರೂ ಮನೆಯಲ್ಲಿ ಬಟ್ಟೆಗೆ ನೀಲಿ ಹಾಕುವಾಗ ಅದು ಸರಿಯಾಗದಿದ್ದರೆ ಅವರು ಏನೋ ಒಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದರಂತೆ. ಅದು ಎಲ್ಲರ ಮನೆಯನ್ನೂ ಮುಟ್ಟಿ ಜನರೆಲ್ಲ ಅದನ್ನು ನಂಬಿ ಅವರೆಲ್ಲ ಅದರ ಬಗ್ಗೆ ಚರ್ಚೆ ನಡೆಸತೊಡಗಿದಾಗ ಇವರ ಮನೆಯ ನೀಲಿ ಸರಿಯಾಗಿ ಅವರ ಬಟ್ಟೆ ಬೆಳ್ಳಗಾಗುತ್ತಿತ್ತಂತೆ.
ಅಂದರೆ ಇದರ ಅರ್ಥ, ತಮ್ಮ ತಪ್ಪಿ ನಿಂದ ಕೆಲಸ ಕೆಟ್ಟು ಹೋದಾಗ ಜನರು ನಂಬುವಂತಹ ಸುಳ್ಳು ಸುದ್ದಿ ಹರಡಿಸಿದರೆ ಅದು ಯಾವುದೋ ಜಾದು ಮಾಡಿ ಅವರ ಕೆಲಸ ಕೈಗೂಡುವಂತೆ ಮಾಡುತ್ತಿತ್ತು ಎಂದಲ್ಲವೇ?

-        ಇಂದು ಎಲ್ಲ ಕನ್ನಡಿಗರ ಮನೆಯಲ್ಲಿ ಎಲ್ಲರೂ ಕೂಡಿ, ಭಿನ್ನಾಭಿಪ್ರಾಯ ಇಲ್ಲದೇ ಶಾಂತ ಚಿತ್ತದಿಂದ, ಚಹಾ ಕುಡಿಯುತ್ತ, ಮೆಲು ನಗೆ ನಗುತ್ತ ನೋಡುವ ಏಕೈಕ ಕಾರ್ಯಕ್ರಮ ವೆಂದರೆ `ಬಿಗ್ ಬಾಸ್’. ಇಂತಹ ಕಮ್ಮಿ ತೂಕದ, ಹುಡುಗಾಟದ ಟೈಂ ಪಾಸ್‍ ಕಾರ್ಯಕ್ರಮ ಕ್ಕೆ ಪ್ರೇರಣೆ  ಯಾಗಿದ್ದು ಒಂದು ಗಂಭೀರ ಕಾದಂಬರಿ ಎನ್ನುವುದು ಅನೇಕರಿಗೆ ಗೊತ್ತಿಲ್ಲ. ಅದರ ಹೆಸರು 1984. ಜನ ಸಾಮಾನ್ಯರ ಜನ ಜೀವನದ ಮೇಲೆ ಸರ್ವಶಕ್ತ ಆಳುವ ವರ್ಗ ಸದಾಕಾಲ ಕಣ್ಣಿಟ್ಟು ನೋಡುತ್ತಿದ್ದರೆ ಏನಾಗಬಹುದು ಎನ್ನುವ ಕಲ್ಪನೆ ಮೂಡಿದ್ದು ಈ ಕಾದಂಬರಿಯಲ್ಲಿ.   
-        ಭಾರತದ ಮೋತಿಹಾರಿಯಲ್ಲಿ ಹುಟ್ಟಿದ ಬ್ರಿಟಿಷ್ ಪ್ರಜೆ ಜಾರ್ಜ್ ಆರವೆಲ್ 1948-49 ರಲ್ಲಿ ಬರೆದ ಈ ಇಂಗ್ಲಿಷ್ ಕಾದಂಬರಿ 1984 ಯಲ್ಲಿ ಇಂದಿಗೂ ಎಂದೆಂದಿಗೂ, ಯಾವ ಪ್ರದೇಶಕ್ಕೂ, ಯಾವ ಜನಸಮುದಾಯಕ್ಕೂ  ಸಲ್ಲಬಹುದಾದ ಕಾದಂಬರಿ.
-        ವಿನಸ್ಟನ್ ಸ್ಮಿತ್ ಎಂಬ ಮಾಮೂಲಿ ಸರಕಾರಿ ನೌಕರನ ಜೀವನ ಕತೆಯಂತೆ ಆರಂಭವಾಗುವ ಇದು ನವ ಯುಗದ ಅತಿ ಮಹತ್ವದ ರಾಜಕೀಯ ಕಾದಂಬರಿಯಾಗಿ ರೂಪುಗೊಳ್ಳುತ್ತದೆ.
-        ಅದರಲ್ಲಿ ಅವನ ಕೆಲಸ ಏನೆಂದರೆ ಹಿಂದಿನ ದಿನ ಪತ್ರಿಕೆ, ಸಾಪ್ತಾಹಿಕ, ಸಾಹಿತ್ಯದ ಪುಸ್ತಕಗಳು, ಹಾಗೂ ನಿಘಂಟುಗಳನ್ನು ತಿದ್ದುವುದು. ತಿದ್ದುವುದು ಎಂದರೆ ಅದರಲ್ಲಿ ಛಾಪಿಸಲಾಗಿರುವ ಅಕ್ಷರ, ಕಾಗುಣಿತ ಅಥವಾ ಮಾಹಿತಿಯ ತಪ್ಪು ಗಳನ್ನು ತಿದ್ದುವುದು ಎಂತಲ್ಲ. ಅವನು ಮಾಡುವ ಕೆಲಸ, ಇಂದಿನ ಸರಕಾರದ ಬೇಕು ಬೇಡಗಳಿಗೆ, ಸೈದ್ಧಾಂತಿಕ ಅನುಕೂಲಗಳಿಗೆ ತಕ್ಕಂತೆ ಹಿಂದಿನ ಘಟನೆಗಳನ್ನು ತಿದ್ದಿ, ಜನರ ವಿಚಾರ ಲಹರಿಯನ್ನೇ ಬದಲಿಸಿ ತಾವು ಹೇಳಿದಂತೆ ಕೇಳುವ ಜನ ಸಮೂಹ ವನ್ನು ಸೃಷ್ಟಿಸುವ ಪ್ರಯತ್ನದ ಒಂದು ಭಾಗ.
-        ಇದರಲ್ಲಿ ಸರಕಾರ ಅಥವಾ ಆಳುವ ವರ್ಗದ ಮೂಗಿನ ನೇರಕ್ಕೆ ಎಲ್ಲವೂ ನಡೆಯುತ್ತದೆ. ಜನರ ವಿಚಾರ ಲಹರಿಯನ್ನು ರೂಪಿಸುವ, ಅವರ ಚಿಂತನೆ, ಮಾತು, ಕೃತಿ, ದಿನ ನಿತ್ಯದ ಜೀವನ ವೆಲ್ಲವೂ ತಮ್ಮ ಆಣತಿಯಂತೆ ನಡೆಯಬೇಕೆಂದು ಬಯಸುವ ಸರಕಾರ, ಇದನ್ನು ಸಾಧಿಸಲು ಅನೇಕ ಮಾರ್ಗ ಹೂಡುತ್ತದೆ.
-        ಅದು ಮೂಲೆ ಮೂಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕೂಡಿಸುತ್ತದೆ. ಎಲ್ಲರ ಮನೆಗಳಲ್ಲಿ ದ್ವಿಮುಖ ಟೀವಿ ಇರುವಂತೆ ನೋಡಿಕೊಳ್ಳುತ್ತದೆ. ಈ ಟೀವಿಗಳು ಹೇಗಿರುತ್ತವೆ ಎಂದರೆ ಅವುಗಳಲ್ಲಿ ಬಿತ್ತರವಾಗುವ ಕಾರ್ಯಕ್ರಮಗಳನ್ನು ನೋಡುತ್ತಾ ಕೂತಿರುವವರನ್ನು ಈ ಟೀವಿಗಳು ನೊಡುತ್ತಿರುತ್ತವೆ. ಅವರ ಚಲನ ವಲನಗಳನ್ನು ಸರಕಾರಕ್ಕೆ ತಿಳಿಸುತ್ತವೆ. ತಮ್ಮ ಆದೇಶದಂತೆ ನಡೆಯದವರನ್ನು ಸರಕಾರ ಬಂಧಿಸುತ್ತದೆ. ನೀರು- ನಿಡಿ ಇಲ್ಲದ ಕತ್ತಲ ಕೋಣೆಯಲ್ಲಿನ ಹಸಿದ ಹೆಗ್ಗಣಗಳು ಅವರ ಮುಖ- ಮೈ ಪರಚಿ  ಅವರನ್ನು ಹಿಂಸಿಸುತ್ತವೆ. ತುಂಬಾ ಆಟವಾಡುವವ ಜನರು, ಚಿಂತಕರು, ಲೇಖಕರು, ವೈಚಾರಿಕ ಸ್ವಾತಂತ್ರ್ಯದ ಮಾತಾಡುವವರು ಕಾಣೆಯಾಗುತ್ತಾರೆ. ಅವರ ಜೀವನಕ್ಕೆ ಸಂಬಂಧಿಸಿದ ಧಾಖಲೆಗಳನ್ನು ಅಳಿಸಿ ಅವರನ್ನು ಅಕ್ಷರಷಃ `ಹುಟ್ಟಲಿಲ್ಲಾ’ ಅನ್ನಿಸಿಬಿಡಲಾಗುತ್ತದೆ. ಈ ಅಳಿಸುವ ಕೆಲಸಗಳಿಗೂ ಸಹ ವಿನಸ್ಟನ್ ನಂತಹವರನ್ನು ಬಳಸಿಕೊಳ್ಳಲಾಗುತ್ತದೆ.
ಈ ಕಾದಂಬರಿ ಇಂಗ್ಲಿಷ್ ಭಾಷೆಯನ್ನು ಇನ್ನಿಲ್ಲದಂತೆ ಬದಲಿಸಿತು. ಆಧುನಿಕ ಜೀವನವನ್ನು ಅರ್ಥೈಸಲು ಇದು ಉಪಕಾರಿಯಾಯಿತು. ಹೊಸ ಶಬ್ದ, ವಾಚ್ಯಾರ್ಥ, ಸಂಕೇತಾರ್ಥಗಳನ್ನು ಜಾಗತಿಕ ಭಾಷೆಗಳಿಗೆ ನೀಡಿತು. ಅವುಗಳಲ್ಲಿ ಕೆಲವು – ಹಿರಿಯಣ್ಣ, ಸುದ್ದಿಮಾತು , ದ್ವಿವಿಚಾರ , ವೈಚಾರಿಕಗುನ್ನೆ, ನೆನಪಿನಗುಂಡಿ ಮುಂತಾದವು.
ಸರಕಾರದ ಮುಖ್ಯಸ್ಥ ಬಿಗ್ ಬ್ರದರ್ ಅಥವಾ ಹಿರಿಯಣ್ಣ. ಅವನು ಇದ್ದಾನೋ ಇಲ್ಲವೋ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ದೊಡ್ಡ ಮೀಸೆ ಹೊತ್ತು ಗಂಭೀರವದನ ಅವನ ಚಿತ್ರ ಮಾತ್ರ ಎಲ್ಲಾ ಬೀದಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಇವೆ. ಎಲ್ಲರನ್ನೂ ನೀವೇನು ಮಾಡುತ್ತಿದ್ದೀರಿ ನನಗೆಲ್ಲಾ ಗೊತ್ತಿದೆ ಎನ್ನುವಂತೆ ಅವು ಎಲ್ಲರನ್ನೂ ನೋಡುತ್ತಿವೆ. ಹಿರಿಯಣ್ಣ ಅನೇಕ ವರ್ಷಗಳಿಂದ ಇನ್ನೊಂದು ದೇಶದ ಜೊತೆ ಯುದ್ಧ ಮಾಡುತ್ತಿದ್ದಾನೆ. ಆ ಯುದ್ಧವೇ ನಡೆದಿಲ್ಲ. ಆ ಶತ್ರು ದೇಶವೇ ಇಲ್ಲ ಎಂದ ಹೇಳಿದ ವಿಚಾರವಾದಿಗಳು ಕಣ್ಮರೆಯಾಗಿದ್ದಾರೆ.
ಸರಕಾರ ರೂಪಿಸಿದ ಕೆಲವು ವಿಚಾರಗಳನ್ನು ಒತ್ತಾಯ ಪೂರ್ವಕವಾಗಿ ಹೇರಲಾಗುತ್ತದೆ. ಅವುಗಳಲ್ಲಿ ಕೆಲವು ಹೀಗಿವೆ.
```ಯುದ್ಧವೇ ಶಾಂತಿ’, ಸ್ವಾತಂತ್ರ್ಯವೇ ದಾಸ್ಯ. ಅಜ್ಞಾನವೇ ಪರಮಸುಖ’’.
``ಭೂತಕಾಲವನ್ನು ನಿಯಂತ್ರಿಸಬಲ್ಲವನು ಭವಿಷ್ಯವನ್ನು ನಿಯಂತ್ರಿಸುತ್ತಾನೆ. ವರ್ತಮಾನ ಕಾಲವನ್ನು ನಿಯಂತ್ರಿಸಬಲ್ಲವನು ಭೂತವನ್ನು ನಿಯಂತ್ರಿಸುತ್ತಾನೆ’’
-        ಹಳೆಯ ಪತ್ರಿಕೆ ಗಳನ್ನು ತಿದ್ದಿ ತಿದ್ದಿ ನಾಯಕ ವಿನಸ್ಟನ್ ಸೋತು ಹೋಗುತ್ತಾನೆ. ತನ್ನಂತೆಯೇ ಕಷ್ಟ ಪಡುತ್ತಿರುವ ಜೂಲಿಯಾ ಎಂಬ ನಾಯಕಿಯನ್ನು ಪ್ರೀತಿಸುತ್ತಾನೆ. ಅವರಿಬ್ಬರೂ ಕೂಡಿ ಕೈಗೊಳ್ಳಬೇಕೆಂದ ಕ್ರಾಂತಿ ಶುರು ಆಗುವುದಕ್ಕಿಂತ ಮುಂಚೆಯೇ ಮುಗಿದು ಹೋಗುತ್ತದೆ. ಇಬ್ಬರನ್ನೂ ಬಂಧಿಸಿ ಹಿಂಸಿಸಲಾಗುತ್ತದೆ. ಬೇರೆ ಯವರ ಮನಸ್ಸನ್ನು ಬದಲಾಯಿಸುವ ಕೆಲಸದಲ್ಲಿ ಇದ್ದ ನಾಯಕನ ಮನಸ್ಸೇ ಬದಲಾಗಿ ಬಿಡುತ್ತದೆ. `ಐ ಲವ್ ಬಿಗ್ ಬ್ರದರ್’ ಎನ್ನುವ ಮಾತಿನೊಂದಿಗೆ ಕಾದಂಬರಿ ಮುಗಿಯುತ್ತದೆ.
-        ನಾನು ಪತ್ರಕರ್ತನೋ, ಗುಮಾಸ್ತನೋ, ಅಥವಾ ವೈಚಾರಿಕಪೋಲಿಸ್ ನ ಗುಪ್ತದಳದ ಸದಸ್ಯನೋ ಎಂಬುವುದು ವಿನಸ್ಟನ್ ನಿಗೆ ಕೊನೆಗೂ ಗೊತ್ತಾಗುವುದೇ ಇಲ್ಲ. ನಮಗೂ ಗೊತ್ತಾಗುತ್ತಿಲ್ಲವೇನೋ?
-        ಸಾಮಾಜಿಕ ಮಾಧ್ಯಮ ವೆಂಬ ಸೋಷಿಯಲ್ ಮೀಡಿಯಾ ಸೃಷ್ಟಿಸುತ್ತಿರುವ ಕೋಟಿಗಟ್ಟಲೇ ರಕ್ತ ಬೀಜಾಸುರ ಪತ್ರ ಕರ್ತರು ಜನರ ಅಭಿಪ್ರಾಯ ರೂಪಿಸುತ್ತಿದ್ದಾರೋ ಅಥವಾ ಅಭಿಪ್ರಾಯ ಸೃಷ್ಟಿಸುತ್ತಿದ್ದಾರೋ? ಈ ನಿಟ್ಟಿನಲ್ಲಿ ಅವರು ಉಪಯೋಗಿಸುತ್ತಿರುವ ಹಾದಿಯಾವುದು? ಪರಿಕರಗಳು ಯಾವುವು?
-         
-        ಈ ಪ್ರಶ್ನೆಗೆ ಉತ್ತರ ದೊರಕುವ ನಿಟ್ಟಿನಲ್ಲಿ ನಾವು ವಿಚಾರ ಮಾಡಲಿಕ್ಕೆ ನಮಗೆ ಸಮಯ- ಸಮಾಧಾನ ಇನ್ನೂ ಇದೆಯೇ, ಇನ್ನೂ ಕಾಲ ಮಿಂಚಿಲ್ಲವೇ ಎನ್ನುವುವೇ ಈ ಕಾಲದ ಅತಿ ದೊಡ್ಡ ಪ್ರಶ್ನೆಗಳಲ್ಲಿ ಕೆಲವು ಎಂದು ನನಗೆ ಅನೇಕ ಸಾರಿ ಅನ್ನಿಸಿದೆ.  ಮುಂದೆ ಎಂದಾದರೂ ಉತ್ತರ ದೊರಕಬಹುದು ಎಂದಾದರೂ ಈ ತರದ ಪ್ರಶ್ನೆಗಳನ್ನು ಕೇಳುತ್ತಿರಬೇಕು ಎನ್ನಿಸುತ್ತದೆ. ಏನಿಲ್ಲವಾದರೇನು ಪ್ರಶ್ನೆಗಳನ್ನಾದರೂ ಕೇಳಿಕೊಳ್ಳಲು ಸಾಧ್ಯವಾಗುತ್ತಿದೆಯಲ್ಲ ವೆಂದೆನಿಸಿ ಹಾಯೆನಿಸುತ್ತದೆ. 
ಹೃಷಿಕೇಶ ಬಹದ್ದೂರ ದೇಸಾಯಿ
ವಿಶೇಷ ವರದಿಗಾರರು, `ದಿ ಹಿಂದೂ’
ಬೆಳಗಾವಿ 
-         

------00000------ 

Comments

Unknown said…
good one.why wont u write in kannada???

Popular posts from this blog

Mahamud Gawan

Literature in Bidar