ಸಾಯೋ ಸುದ್ದಿ
ಎಲ್ಲರಿಗೂ ನಮಸ್ಕಾರ.
ಎಲ್ಲ ಸುಂದರ ವಾದ ಪುರಾಣ ಕತೆಗಳೂ ಶುರುವಾಗುವ ಶೈಲಿಯಲ್ಲಿಯೇ ನಮ್ಮ ಇಂದಿನ ಕತೆಯನ್ನು ಶುರು ಮಾಡೊಣ.
ಒಂದಾನೊಂದು ಕಾಲದಲ್ಲಿ, ಅಂದರೆ ಪೇಪರಿನವರೇ ಈ ಬ್ರಹ್ಮಾಂಡದ ಅನಭಿಷಕ್ತ ದೊರೆಗಳಾಗಿದ್ದೇವೆ ಎಂದು ತಿಳಿದುಕೊಂಡಿದ್ದ ಕಾಲದಲ್ಲಿ, ಬೆಂಗಳೂರೆಂಬೋ ಬೆಂಗಳೂರಿನಲ್ಲಿ ಒಂದು ಘಟನೆ ನಡೆಯಿತು.
ಒಂದು ಭಾನುವಾರ ಮುಂಜಾನೆ ಬೆಳಗಿನ ಪಾಳಿಯ ಪತ್ರಕರ್ತರೆಂಬೋ ಎಲ್ಲಾ ಶಾಪಗ್ರಸ್ತರು ಪ್ರೆಸ್ ಕ್ಲಬ್ಬಿನ ಅಂಗಳದಲ್ಲಿ ಯಾವುದೋ ಒಂದು ಕಾರ್ಯಕ್ರಮದ ಪಿಕ್ ಅಪ್ಪಿನ ವಾಹನಕ್ಕಾಗಿ ಕಾಯ್ದು ಕುಳಿತಿದ್ದೆವು. ಅಷ್ಟೊತ್ತಿಗೆ ``ಬಲಿರೆ ಪರಾಕ್ರಮ ಕಂಠೀರವ ಬಲ್ಲಿರೇನಯ್ಯ?’’ಅನ್ನುತ್ತಾ ನಮ್ಮೆಲ್ಲರಿಗೆ ಹಿರಿಯ ರಾಗಿದ್ದ, ಈಗ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿರುವ ಎಂ. ಸಿದ್ಧರಾಜ ಸರ್ ಅವರು ರಂಗ ಪ್ರವೇಶ ಮಾಡಿದರು.
``ಅಲ್ರಯ್ಯಾ, ಭಾನುವಾರ ಬೆಳ -ಬೆಳಗ್ಗೆ, ಮನೆಯಲ್ಲಿ ಬೆಚ್ಚಗೆ ಕಾಫಿ ಕುಡಕೊಂಡು, ಮಧ್ಯಾಹ್ನ ಚನ್ನಾಗಿ ಬಾಡೂಟ ಮಾಡಕೊಂಡ್ ಮಲಕೊಳ್ಳೊದ್ ಬಿಟ್ಟು ಇದೇನ್ ಕರ್ಮಾ ನ್ ರಯ್ಯಾ ನಮಗೆಲ್ಲಾ? ಅಂದರು.
ಇವತ್ತಿನ ಭಾನುವಾರ ಈ ಚಂದದ ಊರಿನ ನೂರಾರು ಬಣ್ಣ ಬಣ್ಣದ ಕಾರ್ಯಕ್ರಮಗಳನ್ನು ಬದಿಗೊತ್ತಿ ಈ ಕಾರ್ಯಾಗಾರಕ್ಕೆ ಬಂದಿರುವ ನಿಮ್ಮನ್ನು ನೋಡಿ ನನಗೆ ಆ ಮಾತು ನೆನಪಾಗುತ್ತಿದೆ.
ಅಂದು ಅವರ ಮಾತಿಗೆ ನಾನು ನಕ್ಕಿದ್ದೆ. ಆದರೆ ಈಗ, ನನಗೆ ವಯಸ್ಸಾಗುತ್ತಿದ್ದಂತೆಯೇ, ಆ ಮಾತಿನ ಅರ್ಥ ಅರಿವಿಗೆ ಬರುತ್ತಿದೆ.
ಪೇಪರಿನಲ್ಲಿ ಕೆಲಸ ಅಂದ ತಕ್ಷಣ ಕಣ್ಣಲ್ಲಿ ಮೂಗಿನಲ್ಲಿ ತುಂಬಿಕೊಂಡು, ಒಳ್ಳೆ ಒಲಂಪಿಕ್ಸಿಗೆ ಹೋದಂಗೆ ಹುಮ್ಮಸ್ಸಿನಿಂದ ಹೋಗುತ್ತಿದ್ದ ನಮ್ಮನ್ನೆಲ್ಲಾ ಕೂಡಿಸಿಕೊಂಡು ಅವರು ಅಂದು ``ನಮ್ಮ ದಿನ ನಿತ್ಯದ ಬದುಕು ಎಲ್ಲಕ್ಕಿಂತ ದೊಡ್ಡದು’’ ಎನ್ನುವ ತೂಕದ ಮಾತೊಂದನ್ನು ಹೇಳಿದರು ಅಂತ ಈಗ ಅನ್ನಿಸುತ್ತಿದೆ.
ಇನ್ನು ನಾನು ಈ ಊರಿಗೆ ಬರುವಾಗ ಸ್ವಲ್ಪ ಹಿಂಜರಿಕೆಯಿಂದಲೇ ಬಂದಿದ್ದೇನೆ. ಉಡುಪಿ ನನ್ನ ಅತ್ತೆಯ ತವರು ಮನೆ. ಹೆಂಡತಿಯ ತವರು ಮನೆಯಲ್ಲಿ ಮಾತಾಡಬೇಕೆಂದರೇ ಅಷ್ಟು ಹೆದರುವ ನಾನು ಅವರ ತಾಯಿಯ ತವರು ಮನೆಯಲ್ಲಿ ಮಾತಾಡಬೇಕಾದರೆ ಅದೆಷ್ಟು ಹಿಂಜರಿಯಬೇಡ? ಅಲ್ಲವೇ?
ಇರಲಿ ಬಿಡಿ. ನಮ್ಮ ಧಾರವಾಡ ಸೀಮೆಯಲ್ಲಿ ಒಂದು ಗಾದೆ ಮಾತು ಇದೆ. `ಶುಭ ನುಡಿಯೇ ಮೊದಲಗಿತ್ತಿ ಎಂದರೆ, ``ಅಂಗಳ ತುಂಬಾ ರಂಡೇರು’’ ಎಂದಿದ್ದಳಂತೆ’ ಅಂತ. ಅಂದರೆ ವಧು ವೊಬ್ಬಳು ಮದುವೆಯಾದ ಮೊದಲ ದಿನ ಬೇರೆ ಎಲ್ಲಾ ವಿಷಯಗಳನ್ನು ಬಿಟ್ಟು ಗಂಡನ ಮನೆಯಲ್ಲಿ ರುವ ಹಿರಿಯ ವಿಧವೆ ಯರ ಬಗ್ಗೆ ಮಾತಾಡಿದ್ದಳಂತೆ.
ಸಾಯೋ ಸುದ್ದಿ
ಅಂತೆಯೇ ನಾನು ಸ್ಮಶಾನ ವೈರಾಗ್ಯ ದ ಮಾತುಗಳೊಂದಿಗೆ ಆರಂಭ ಮಾಡುತ್ತಿದ್ದೇನೆ. `ಕನಸೆಂಬೋ ಕುದುರೆಯನೇರಿ’ ಎನ್ನುವ ಗಿರೀಶ ಕಾಸರವಳ್ಳಿ ಅವರ ಸಿನಿಮಾದಲ್ಲಿ ನಾಯಕನಿಗೆ ನಾಳೆ ಯಾರು ಸಾಯುತ್ತಾರೆ ಎನ್ನುವ ಕನಸು ಬೀಳುತ್ತದೆ. ಸಮಾಧಿಯ ತೆಗ್ಗು ತೊಡುವ ಕಾಯಕದ ಆ ಬಡವ ತನಗೆ ಸಿಗುವ ಕೂಲಿಯ ಆಸೆಯಿಂದ ಸಾಯಲಿರುವ ಸಾಹುಕಾರರ ಮನೆ ಯ ಮುಂದೆ ಕೂಡುತ್ತಾನೆ. ನಮ್ಮ ಯಜಮಾನ ಸಾಯಬಾರದು ಇಷ್ಟು ಬೇಗ ಸಾಯಬಾರದು ಎಂಬ ದುರಾಸೆಯಿರುವ ಕುಟುಂಬ ವೊಂದರ ಸದಸ್ಯರು ಅವನನ್ನು ಹೊಡೆದು ಹೊರಗಟ್ಟುತ್ತಾರೆ.
ನಾಯಕ ನ ಪಾತ್ರ ವಹಿಸಿರುವ ವೈಜನಾಥ ಬಿರಾದಾರ್ ಅವರು ಬೀದರ್ ಜಿಲ್ಲೆಯವರು. ಅಲ್ಲಿಂದ ಬಂದಿರುವ ನಾನು ಇನ್ನು ಕೆಲವೇ ವರ್ಷಗಳಲ್ಲಿ ಪತ್ರಿಕೋದ್ಯಮ ಸಾಯುತ್ತದೆ ಎನ್ನುವ ಕನಸು ಬಿದ್ದಿರುವಂತೆ ನಟಿಸುತ್ತಿದ್ದೇನೋ ಏನೋ. ಆ ಕೆಟ್ಟ ಸುದ್ದಿಯನ್ನು ಹೇಳಲು ನಿಮ್ಮ ಮನೆಯ ಕಟ್ಟೆಗೆ ಬಂದು ಕೂತಿದ್ದೇನೋ ಏನೋ. ``ಹಾಗೇನೂ ಆಗುವುದಿಲ್ಲ ಹೋಗೋ’’ ಎಂದು ನೀವು ನನ್ನನ್ನು ಗದರಿಸಿ ಕಳಿಸುತ್ತೀರೇನೋ ಅಂತ ನನಗೆ ಅನ್ನಿಸುತ್ತದೆ. ಸಾಧಾರಣವಾಗಿ ಕೆಟ್ಟ ಸುದ್ದಿ ತರುವವರು ಅವಿವೇಕಿಗಳೇ ಆಗಿರುವುದರಿಂದ, ನಾನು ಏನಾದರೂ ಹೆಚ್ಚು ಕಮ್ಮಿ ಮಾತಾಡಿದರೆ ಅವರಲ್ಲಿ ನಾನೂ ಒಬ್ಬ ನೆಂದು ನೀವು ಅಂದುಕೊಂಡು ಬಿಡಿ.
ಕಳೆದ ವಾರ ಬಿಸಿನೆಸ್ ಸ್ಟ್ಯಾಂಡರ್ಡ್ ನಲ್ಲಿ ಅಂಕಣ ಬರೆದ ಆಕಾರ ಪಟೇಲ್ ಅವರು ಪತ್ರಿಕೆಗಳ ನಿಧನಕ್ಕೆ ದಿನಾಂಕ ನಿಗದಿ ಮಾಡಿದ್ದಾರೆ. ಅವರ ಪ್ರಕಾರ 2020ಕ್ಕೆ, ಅಂದರೆ ಇಂದಿಗೆ ಕೇವಲ ಮೂರು ವರ್ಷಗಳಲ್ಲಿ ಭಾರತದಲ್ಲಿ ಪತ್ರಿಕೆಗಳೇ ಇರೋದಿಲ್ಲ. ಇವತ್ತಿನ ಮಟ್ಟಿಗೆ ನಾವು ಯಾವುದನ್ನು ಸುದ್ದಿ ಎಂದುಕೊಳ್ಳುತ್ತೀವೋ, ಅದಂತೂ ಅದಕ್ಕಿಂತ ಮೊದಲೇ ಹೋಗಿ ಬಿಟ್ಟಿರುತ್ತದೆ ಎಂದು ಹೇಳಿದ್ದಾರೆ. ಸುದ್ದಿಗೂ ಮನರಂಜನೆಗೂ ವ್ಯತ್ಯಾಸವೇ ಗೊತ್ತಾಗದಂತೆ ಆಗಬಹುದು. ಸುದ್ದಿ ಎಂದರೆ ಕೇವಲ ಅಭಿಪ್ರಾಯ ಮಂಡನೆ ಆಗಿಬಿಡುತ್ತದೆ. ಪತ್ರಕರ್ತರು ಬೇರೆ ಕೆಲಸ ಹುಡುಕಬೇಕಾಗಬಹುದು. ಇದು ಕೇವಲ ಇಂಗ್ಲೀಷ್ ಪತ್ರಿಕೆಗಳ ಹಣೆಬರಹ ಅಲ್ಲ. ಭಾರತೀಯ ಭಾಷೆಗಳೂ ಇದೇ ಸಮಸ್ಯೆ ಎದುರಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.
ನೀವು ನಿನ್ನೆಯ ಟೈಂಸ್ ಆಫ್ ಇಂಡಿಯಾದ ಸಂಪಾದಕೀಯವನ್ನು ನೋಡಿದ್ದರೆ ಪತ್ರಿಕೆಗಳ ನಷ್ಟದ ಪ್ರಮಾಣ ನಿಮ್ಮ ಗಮನಕ್ಕೆ ಬಂದಿರಬಹುದು. ಗಳಿಕೆ ಕೇವಲ ನಾಲ್ಕು ಶೇಕಡಾ ಹೆಚ್ಚಾಗಿದ್ದರೆ, ಖರ್ಚು ಶೇ. 58 ರಷ್ಟು ಬೆಳೆದಿದೆ. ಸರಕಾರ ತೆರಿಗೆ ಕಡಿಮೆ ಮಾಡಿ, ಜಾಹಿರಾತನ್ನು ಹೆಚ್ಚಿಸಿದರೆ ಮಾತ್ರ ಪರಿಸ್ಥಿತಿ ಸುಧಾರಿಸಬಲ್ಲದು ಎಂದು ಅದರಲ್ಲಿ ಹೇಳಲಾಗಿದೆ.
ಸಾವು ಹಾಗೂ ನಾವು
ಈಗ ಸ್ವಲ್ಪ ಗರುಡ ಪುರಾಣದ ದ ಗಮನ ಹರಿಸೋಣ. ಕುಟುಂಬ ದ ಸದಸ್ಯರೊಬ್ಬರು ತೀರಿ ಹೋದಾಗ ಅವರ ಸಂಬಂಧಿಕರು ಒಟ್ಟಾಗಿ ಕೇಳುವ ಪುರಾಣ ವಿದು. ಅದರಲ್ಲಿ ಮೃತ್ಯುವಿನ ಬಗ್ಗೆ ಈ ಮಾತು ಬರುತ್ತವೆ.
1.``ಹುಟ್ಟುವವರು ಸಾಯಲೇ ಬೇಕು. ಸತ್ತವರು ಹುಟ್ಟಲೇ ಬೇಕು. ಪ್ರಾಜ್ಞರು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು’’
2. ``ದೇಹ ವೆನ್ನುವುದು ಒಂದು ಕನಸಷ್ಟೇ. ಅದರ ರೂಪ ಮುಖ್ಯವಲ್ಲ. ಅದರಲ್ಲಿ ಇರುವ ಆತ್ಮ ಮುಖ್ಯ. ಅದು ಇಂದು ಇರುತ್ತದೆ, ನಾಳೆ ಹೋಗುತ್ತದೆ. ಈ ಬಾಹ್ಯ ರೂಪಕ್ಕೆ ಅಂಟಿಕೊಂಡು ಕೂಡಬಾರದು. ನಮ್ಮ ದೇಹವೇ ತಾತ್ಕಾಲಿಕವಾದಾಗ ಇತರರ ದೇಹ ಶಾಶ್ವತ ವಾಗಿರಲಿ ಎಂದು ಏಕೆ ಆಸೆ ಪಡಬೇಕು?’’
ಆದರೆ ಈ ಎರಡೂ ಮಾತು ಗಳು ಪತ್ರಿಕೆ ಗಳ ಬಗ್ಗೆ ಹೇಳಿದಂತೆ ನನಗೆ ಕೇಳಿಸುತ್ತದೆ.
ಹಾಗಾದರೆ ಇಷ್ಟೆಲ್ಲಾ ಆಗುತ್ತಿರುವುದಕ್ಕೆ ಕಾರಣಗಳೇನು? ಸಿಬ್ಬಂದಿ ವೇತನ ಹಚ್ಚಳಕ್ಕೆ ಕಾರಣವಾದ ವೇತನ ಆಯೋಗ, ಜಾರುತ್ತಿರುವ ಜಾಹಿರಾತು ವರಮಾನ, ಮುದ್ರಣ ತಂತ್ರಜ್ಞಾನ ಹಾಗೂ ಕಾಗದದ ಬೆಲೆ ಹೆಚ್ಚಳ, ಹಾಗೂ ನಲವತ್ತು ವರ್ಷಗಳಿಂದ ಬದಲಾಗದೇ ಇರುವ ಮುಖ ಬೆಲೆ.
ಇದಕ್ಕೆ ಇರುವ ಇನ್ನೊಂದು ಮುಖ್ಯ ಕಾರಣ ಎಂದರೆ ಬದಲಾಗುತ್ತಿರುವ ತಂತ್ರಜ್ಞಾನ ಹಾಗೂ ನಮ್ಮ ಬದುಕಿನ ಮೇಲೆ ನಿಧಾನವಾಗಿ ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ಪ್ರಭಾವ.
ಕೆಲವೇ ಕೆಲವು ಜನ ಕಚೇರಿಯಲ್ಲಿ ಕುಳಿತುಕೊಂಡು ತಯಾರಿಸುವ ಪತ್ರಿಕೆಗಳಿಗಿಂತ ಎಲ್ಲರ ಕೈಯಲ್ಲಿ ಓಡಾಡುವ ಫೋನುಗಳಿಂದ, ಮನೆಗಳಲ್ಲಿನ ಗಣಕಗಳಿಂದ ಕ್ಷಣಕ್ಷಣಕ್ಕೂ ಮೂಡುವ ಸಾಮಾಜಿಕ ಜಾಲತಾಣಗಳ ಪೋಸ್ಟುಗಳು ಹೆಚ್ಚು ಆಸಕ್ತಿ ಮೂಡಿಸುತ್ತಿವೆಯೇ?
ನಾನು ಯಾವುದಾದರೂ ಕಾಲೇಜಿಗೆ ಹೋದಾಗ ಇವತ್ತು ಎಷ್ಟು ಜನ ಪೇಪರ್ ಓದಿದ್ದೀರಿ ? ಎಂದು ಕೇಳುತ್ತೇನೆ. ಬಹಳ ಕಡಿಮೆ ಜನ ಕೈ ಎತ್ತುತ್ತಾರೆ. ಅಯ್ಯೋ ಹಾಗೆ ಮಾಡಬೇಡಿ ಎನ್ನುತ್ತೇನೆ.
ಎಷ್ಟು ಜನ ಫೋನಿನಲ್ಲಿ ಟ್ವಿಟರ್- ಫೇಸ್ ಬುಕ್ ನೋಡಿದ್ದೀರಿ? ಎಂದಾಗ ಇಡೀ ಕ್ಲಾಸು ಕೈ ಎತ್ತುತ್ತದೆ.ಅದರಲ್ಲಿ ಏನ ನ್ನು ನೋಡಿದ್ದೀರಿ ಎಂದರೆ ಅರ್ಧದಷ್ಟಾದರೂ ಜನ ಪತ್ರಿಕೆಗಳ ಸುದ್ದಿಗಳನ್ನೇ ಓದಿರುತ್ತಾರೆ. ಇಂಥದೆಲ್ಲದಕ್ಕೆ ಬೇಡಿಕೆ ಇದೆ ಎಂದರೆ ನಮಗೆ ನಷ್ಟವಾಗುತ್ತಿರುವುದು ಏಕೆ?
ಹೊಸ ತಂತ್ರಜ್ಞಾನ ಬಂದಾಗ ಹಳೆಯದು ಹೊರಹೊಗುತ್ತದೆ ಎನ್ನುವ ಮಾತು ಸಹಜ. ಬ್ರಿಟಿಷರ ಯಂತ್ರ ಗಳು ತಯಾರಿಸಿದ ಚಮಕ್ ಬಟ್ಟೆಗಳ ಭರಾಟೆಯ ಎದುರಿಗೆ ಕೈಮಗ್ಗದ ಬಟ್ಟೆಗಳು ಸೋತು ಹೋಗುತ್ತಿದ್ದಾಗ ಇದೇ ಮಾತು ಕೇಳಿ ಬಂದಿದ್ದು. ಟಿವಿ ಬಂದಾಗ ರೇಡಿಯೋದ ಬಗ್ಗೆ ಇದೇ ಮಾತುಗಳನ್ನು ಹೇಳಲಾಗಿತ್ತೇ? ಇಂಟರನೆಟ್ ಬಂದಾಗ ಇತರ ಎಲ್ಲ ಸುದ್ದಿ ಹಾಗೂ ಮನರಂಜನೆಯ ಮಾಧ್ಯಮಗಳ ಬಗ್ಗೆ ಇದನ್ನೇ ಹೇಳಲಾಗಿತ್ತೇ?
ಹೌದು ಮತ್ತು ಇಲ್ಲ. ಹೌದು ಎನ್ನುವುದು ಯಾಕೆಂದರೆ ತಂತ್ರಜ್ಞಾನ ಬದಲಾವಣೆಯ ಪ್ರತಿಯೊಂದು ಮೆಟ್ಟಿಲಲ್ಲೂ ಸಹ ಹಳೆಯ ತಾಂತ್ರಿಕತೆ, ಪದ್ಧತಿ, ಶೈಲಿ ಇವೆಲ್ಲದಕ್ಕೂ ಅಸುರಕ್ಷತಾ ಭಾವ ಕಾಡಿದ್ದಿದೆ. ಹೊಸದನ್ನು ಜನ ಅಪ್ಪಿಕೊಂಡಾಗ ಹಳೆಯದು ಇರಲೇ ಇಲ್ಲ ವೇನೋ ಎನ್ನುವಂತೆ ನಡೆದುಕೊಂಡಿದ್ದಿದೆ. ವಿದ್ಯುತ್ ದೀಪದಿಂದಾಗಿ ಕೆಲಸ ಕಳೆದುಕೊಂಡ ಕುಂಬಾರರು, ಎಣ್ಣೆ ತೆಗೆಯುವವರು ಬೇರೆ ಕೆಲಸ ಕಲಿತುಕೊಂಡರು. ಹೊಸ ರೀತಿಯ, ಹೊಸ ಶೈಲಿಯ, ಹೊಸ ಆರ್ಥಿಕತೆಗೆ ಹೊಂದಿಕೊಳ್ಳುವ ಹೊಸ ಕುಂಬಾರರು, ಎಣ್ಣೆ ತೆಗೆಯುವವರು ಹುಟ್ಟಿಕೊಂಡರು. ಆ ಕತೆಗಳೇ ಬೇರೆ.
ಆದರೆ ಈಗಿನ ಸವಾಲೇ ಬೇರೆ. ಸಾಮಾಜಿಕ ಜಾಲತಾಣಗಳು ಕೇವಲ ತಮ್ಮ ತಂತ್ರಜ್ಞಾನ, ಅಥವಾ ಸ್ವರೂಪ (ಫಾರ್ಮ್) ನಿಂದಾಗಿ ಮಾತ್ರ ಹಳೆಯದಕ್ಕೆ ಸೆಡ್ಡು ಹೊಡೆಯುತ್ತಿಲ್ಲ. ನಮ್ಮ ಚಿಂತನಾ ಕ್ರಮ, ಮಾತುಕತೆ, ನಿರೂಪಣೆ, ವಾದ -ವಿವಾದದ ರೀತಿ, ಹಾಗೂ ಅಂತಿಮವಾಗಿ ಮನುಷ್ಯ ಸಂಬಂಧಗಳ ನ್ನು ಸಹ ಇವು ಬದಲಾಯಿಸುತ್ತಿವೆ.
ನವ ಮಾಧ್ಯಮದಿಂದ ಹಳೆಯ ಮಾಧ್ಯಮಗಳಿಗೆ ಅಪಾಯ ಇದೆ ಎನ್ನವುದು ಕೇವಲ ಪತ್ರಿಕೆ ಗಳ ಬಗ್ಗೆ ಹೇಳುವ ಮಾತಲ್ಲ. ಈ ಮಾತುಗಳನ್ನು ಟಿವಿ, ಹಾಗೂ ರೇಡಿಯೋ ಗಳ ಬಗೆಯೂ ಹೇಳಬಹುದು.
ನಾನು ಕೆಲಸ ಶುರು ಮಾಡಿದಾಗ ಟೈಪ್ ಸೆಟ್ಟಿಂಗ್ ಹೋಗಿ ಕಂಪ್ಯೂಟರ್ ಗಳ ಬಳಕೆ ಆರಂಭವಾಗಿತ್ತು. ನಮ್ಮ ಸುದ್ದಿಗಳನ್ನು ಮುದ್ರಣ ಹಾಗೂ ಅಂತರ್ಜಾಲ ಇವೆರಡರಲ್ಲೂ ಏಕಕಾಲಕ್ಕೆ ಹೊರಹಾಕಿದ, ತನ್ನ ಸುದ್ದಿ ಗಳ ಮೂಲವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿದ ತಲೆಮಾರು ಬಹುಶಃ ನಮ್ಮದೇ ಇರಬಹುದು. ಇದನ್ನು ನೆನೆಸಿಕೊಂಡಾಗ ನನಗೆ ಅಮೇರಿಕೆಯ ನನ್ನ ಸ್ನೇಹಿತ ಸ್ಯಾಮ್ ಫೋರ್ಮನ್ ನೆನಪಾಗುತ್ತಾರೆ. ಅವರ ಅಜ್ಜ ತಮ್ಮ ಜೀವನ ಕಾಲದಲ್ಲಿ ರೈಟ್ ಸಹೋದರರ ವಿಮಾನ ನೆಲದಿಂದ ಮೇಲಕ್ಕೆ ಎದ್ದಿದ್ದನ್ನೂ ಹಾಗೂ ಅಮೇರಿಕೆ ಯ ಗಗನ ಯಾತ್ರಿಗಳು ಚಂದ್ರನ ಮೇಲೆ ಕಾಲಿಟ್ಟದ್ದನ್ನೂ ನೋಡಿದ್ದರಂತೆ.
ಏನೇನನ್ನೋ ನೊಡಿದ್ದ ನಾವು ಇನ್ನೂ ಎನೇನನ್ನೋ ನೋಡಲಿದ್ದೇವೆಯೋ?
ಪರಿಹಾರದ ಆಶಯ
ಗ್ರೀನ್ ನ್ಯೂ ಯಾರ್ಕ್ ಟೈಮ್ಸ್ ನ ಲ್ಯಾಟಿನ್ ಅಮೇರಿಕ ವಿಭಾಗದ ಮುಖ್ಯಸ್ಥರಾದ ಲಿಡಿಯಾ ಪೊಲ್ ಬರೆದ ``ನಾವೆಲ್ಲಾ ಯಾಕೆ ನ್ಯೂ ಯಾರ್ಕ್ ಟೈಮ್ಸ್ ಓದಬೇಕು?’’ ಎನ್ನುವ ಲೇಖನವನ್ನು ನೋಡಿದರೆ ಪರಿಸ್ಥಿತಿ ಅಷ್ಟೊಂದು ಕೈ ಮೀರಿ ಹೋಗಿಲ್ಲ ವೆನ್ನುವ ಅರಿವಾಗುತ್ತದೆ.
ಫೇಸುಬುಕ್ಕಿನಿಂದ ಜಾಹಿರಾತನ್ನು ಕಳೆದುಕೊಂಡ ಸಂಸ್ಥೆ ಮತ್ತೆ ಫೇಸುಬುಕ್ಕನ್ನೇ ಬಳಸಿ ಹೊಸ ಓದುಗರನ್ನು ಹುಡುಕಿಕೊಂಡ ಪರಿಯನ್ನು ಈ ಲೇಖನ ತಿಳಿಸುತ್ತದೆ.
ತಮ್ಮ ತಮ್ಮ ಆಸಕ್ತಿ – ಸ್ವಭಾವ ಹಾಗೂ ಅಭಿಪ್ರಾಯದ ಆಧಾರದ ಮೇಲೆ ಜನರನ್ನು ವಿಭಿನ್ನ ಗುಂಪುಗಳಾಗಿ ವಿಂಗಡಿಸುವ ತಂತ್ರಜ್ಞಾನದ ಮೇಲೆ ನಿಂತಿರುವ ಫೇಸುಬುಕ್ಕು ನ್ಯೂ ಯಾರ್ಕ್ ಟೈಮ್ಸ್ ತನ್ನಲ್ಲಿ ಅಚ್ಚಾಗುವ ಸುದ್ದಿಗಳಿಗೆ ಸೂಕ್ತ ಓದುಗರನ್ನು ಹುಡುಕಿ, ಅವರನ್ನು ದುಡ್ಡು ಕೊಟ್ಟು ಓದುವ ಗ್ರಾಹಕರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದೆ.
ಆ ಪತ್ರಿಕೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಾಹಿರಾತಿಗಿಂತ ಹೆಚ್ಚು ಆದಾಯವನ್ನು ಆನ್ ಲೈನ್ ಓದುಗರಿಂದ ಚಂದಾ ಸಂಗ್ರಹಿಸಲಾಗುತ್ತಿದೆ.
ಇದು ಮಾಹಿತಿ ತಂತ್ರಜ್ಞಾನದ ಸಾಗರದಲ್ಲಿ ಕೊಚ್ಚಿ ಹೋಗುತ್ತಿರುವ ಪತ್ರಕರ್ತರಿಗೆ ಆಸರೆಯ ಕಡ್ಡಿ ಇರಬಹುದೋ ಏನೋ.
`ಸತ್ಯೋತ್ತರ’
ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಡೊನಾಲ್ಡ ಟ್ರಂಪ್ ಅವರು ಅಧಿಕಾರ ಸ್ವೀಕರಿಸಿದ ಎರಡು ದಿನಗಳ ನಂತರ ನಾವು ಭೇಟಿ ಆಗಿದ್ದೇವೆ. ಯಾವುದು ಅಮೇರಿಕದಂತಹ ಮುಂದುವರೆದ ದೇಶದಲ್ಲಿ ನಡೆಯಲು ಸಾಧ್ಯವೇ ಇಲ್ಲವೆಂದು ರಾಜಕೀಯ ಪಂಡಿತರೂ ಸೇರಿದಂತೆ ಅನೇಕರು ಅಂದುಕೊಂಡಿದ್ದರೋ ಅದು ಘಟಿಸಿ ಹೋಗಿದೆ. ತನ್ನ ವಿರೋಧಿಗಿಂತ ಮೂವತ್ತು ಲಕ್ಷ ಕಡಿಮೆ ಮತಗಳನ್ನು ಪಡೆದ ಟ್ರಂಪ್ ಅವರು ಜಗತ್ತಿನ ಅತಿ ದೊಡ್ಡ ಮಿಲಿಟರಿ ಶಕ್ತಿಯ ಮುಖ್ಯ ಕಮಾಂಡರ್ ಆಗಿದ್ದಾರೆ.
ಸುಮಾರು ಎರಡು ನೂರು ವರ್ಷ ಹಳೆಯ ಚುನಾವಣಾ ವ್ಯವಸ್ಥೆ ಯಲ್ಲಿ ದೋಷವಿದ್ದುದರಿಂದ ಕಮ್ಮಿ ಓಟು ತೆಗೆದುಕೊಂಡವರೂ ಗೆಲ್ಲುವಂತಾಗಿರಬಹುದು. ಆದರೆ ಸುಳ್ಳು ಸುದ್ದಿ ಹಬ್ಬಿಸುವುದರಿಂದ ಟ್ರಂಪ್ ಗೆದ್ದರು ಎನ್ನುವುದು ಅದಕ್ಕಿಂತ ಹೆಚ್ಚಿನ ಮಹತ್ವದ್ದು. ಟ್ರಂಪ್ ಅವರ ಕುಟುಂಬದ ಅಡ್ಡ ಹೆಸರು ತುತ್ತೂರಿ ಅಥವಾ ತಮಟೆ ಯಿಂದಾಗಿ ಬಂದಿದ್ದಂತೆ. ಸಮೂಹ ಮಾಧ್ಯಮಗಳಲ್ಲಿ ನನಗೆ ವಿಶ್ವಾಸ ವಿಲ್ಲ ವೆಂದು ಘಂಟಾ ಘೋಷವಾಗಿ ಹೇಳಿಕೊಳ್ಳುವ ಟ್ರಂಪ್ ಅವರು ಹೆಸರಿಗೆ ತಕ್ಕಂತೆ ತಮ್ಮ ತಮಟೆ ಊದಲಿಕ್ಕೆ ಬಳಸಿಕೊಂಡಿದ್ದು ಸಾಮಾಜಿಕ ಮಾಧ್ಯಮ ತಾಣಗಳನ್ನು.
ಟ್ರಂಪ್ ಅವರು ಹೇಳಿದ್ದು ಸುಳ್ಳು ಹೌದೋ ಅಲ್ಲವೋ ಎನ್ನುವುದನ್ನು ಪರೀಕ್ಷಿಸಲಿಕ್ಕೆಯೇ ಈಗ ಪಾಲಿಟ್ ಫ್ಯಾಕ್ಟ್ ಮುಂತಾದ ತಾಣಗಳು ಹುಟ್ಟಿಕೊಂಡಿವೆ.
ಅವರು ಹೇಳಿದ್ದು ಸುಳ್ಳಲ್ಲ, ಸತ್ಯೋತ್ತರ ಎಂದು ಕೆಲವರು ಬಣ್ಣಿಸಿದ್ದಾರೆ. ಭಾರತೀಯ ತತ್ವ ಶಾಸ್ತ್ರದ ಪ್ರಕಾರ ಸತ್ಯದ ನಂತರ ಬರುವುದು ಋತ, ಅಂದರೆ ಅಂತಿಮ ಸತ್ಯ, ಸರ್ವ ಕಾಲಿಕ ಸತ್ಯ. ಸುಳ್ಳಲ್ಲ ಎನ್ನುವುದು ನನ್ನ ನಂಬಿಕೆ.
ಅದಕ್ಕೆ ಉತ್ತರ ವೆಂಬಂತೆ ಬರಾಕ್ ಒಬಾಮಾ ಅವರು ಸಮೂಹ ಮಾಧ್ಯಮಗಳ ಮೇಲೆ ಜನರ ನಂಬಿಕೆ ಕಡಿಮೆ ಯಾಗುತ್ತಿದೆ. ಇದನ್ನು ಮಾಧ್ಯಮಗಳು ಒಂದು ಸುವರ್ಣ ಅವಕಾಶ ವನ್ನಾಗಿ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇನ್ನು ಇಡೀ ಜಗತ್ತಿನಲ್ಲಿಯೇ ಅತಿ ದೊಡ್ಡ ಚುನಾವಣೆ ಎಂಬ ಹೆಗ್ಗಳಿಕೆ ದೊರಕಿದ್ದು ಭಾರತದ ಲ್ಲಿ ನಡೆದ 2014 ರ ಲೋಕಸಭಾ ಚುನಾವಣೆಗೆ.
ಇದಕ್ಕೆ ಇನ್ನೂ ಇತರ ವಿಶೇಷಣಗಳು ಅಂಟಿಕೊಂಡಿವೆ. ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ಮತದಾರರು ಭಾಗವಹಿಸಿದ್ದು, ಅತಿ ಹೆಚ್ಚು ಶೇಕಡಾ ಮತದಾನ ವಾಗಿದ್ದು ಹಾಗೂ ಅತಿ ಹೆಚ್ಚು ಸಂಖ್ಯೆಯ ಚುನಾವಣಾ ಸಿಬ್ಬಂದಿ ಕೆಲಸ ಮಾಡಿದ್ದು. ಇವಕ್ಕೆ ಹೋಲಿಸಬಹುದಾದ ದಾಖಲೆಗಳು ಇತರ ಯಾವ ದೇಶಗಳಲ್ಲಿಯೂ ಇಲ್ಲ.ಆದ್ದರಿಂದ ಇವೆಲ್ಲವೂ ಜಾಗತಿಕ ದಾಖಲೆಗಳೂ ಹೌದು.
ಅತಿ ಹೆಚ್ಚಿನ ಪ್ರಮಾಣದಲ್ಲಿ ಯುವಕರು ಹಾಗೂ ಮಧ್ಯಮ ವರ್ಗದವರು ಚುನಾವಣೆಯಲ್ಲಿ ಆಸಕ್ತಿ ತಳೆದ ಚುನಾವಣೆ ಇದು ಎಂದು ಸಹ ಕೆಲವರು ಹೇಳುತ್ತಿದ್ದಾರೆ.
ಆದರೆ ಇದನ್ನೂ ಒಳಗೊಂಡಂತೆ ಈ ಚುನಾವಣೆಯ ಬಗೆಗಿನ ಇತರ ಹಲವು ವಿದ್ಯಮಾನಗಳ ಬಗ್ಗೆ ಸರಿಯಾದ ಸಂಶೋಧನೆ ನಡೆದಿಲ್ಲ.
ಇನ್ನು ಪ್ರಶಾಂತ ಕಿಶೋರರಂತಹ ವೃತ್ತಿಪರ ಪ್ರಬಂಧಕರು ಇಡೀ ಪ್ರಚಾರವನ್ನು ಮುನ್ನಡೆಸಿದ್ದು ಸಹ ಈ ಬಾರಿಯ ವಿಶೇಷ. ಒಂದಕ್ಕಿಂತ ಹೆಚ್ಚು ಪಕ್ಷಗಳ ಅಭ್ಯರ್ಥಿ ಗಳು ಇಂಥವರ ನೆರವನ್ನು ಪಡೆದಿವೆ ಎನ್ನುವುದನ್ನು ನಾವು ಮರೆಯಬಾರದು.
ಅಂತೆಯೇ ಈ ಚುನಾವಣೆ ಯನ್ನು ಬಹಳ ದಿನಗಳ ವರೆಗೆ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿದ್ದು, ಇದರಲ್ಲಿನ ಸಾಮಾಜಿಕ ಜಾಲತಾಣಗಳ ಬಳಕೆ. ಮಾಹಿತಿ ತಂತ್ರಜ್ಞಾನ ದ ಬೆಳವಣಿಗೆ ಹಾಗೂ ಅದನ್ನು ಬಳಸುವ ನೀತಿ ನಿಯಮ ಗಳ ಸರಳೀಕರಣದ ನಂತರ ಸಾಮಾಜಿಕ ಜಾಲತಾಣಗಳು ಅನೇಕರ ಕೈಸೇರಿದವು. ಇವು ಚುನಾವಣೆ ಪ್ರಚಾರದ ಮೂಲ ಸ್ವರೂಪವನ್ನೇ ಬದಲಾಯಿಸಿದವು. ಇದೆಲ್ಲ ಸಾಧ್ಯವಾದದ್ದು ಸಾಮಾಜಿಕ ಜಾಲತಾಣಗಳ ಬಳಕೆಯಿಂದಾಗಿ ಎನ್ನುವವರಿದ್ದಾರೆ. ಅಷ್ಟೇ ಜೋರಾಗಿ ಅದನ್ನು ಅಲ್ಲಗಳೆಯುವವರೂ ಇದ್ದಾರೆ.
ಇಲ್ಲಿಯವರೆಗೆ, ಸರ್ವೇ ಸಾಧಾರಣವಾಗಿ ಚುನಾವಣಾ ಪ್ರಚಾರ ಸಾಮಗ್ರಿಯ ಮೂಲ ಒಂದೇ ಇರುತ್ತಿತ್ತು. ಅದು ಸಂಪೂರ್ಣವಾಗಿ ಬದಲಾಯಿತು. ತಮ್ಮ ತಮ್ಮ ವೈಯಕ್ತಿಕ ನೆಲೆಯಿಂದ ಅನೇಕರು ಅನೇಕ ರೀತಿಯ ಪ್ರಚಾರ ಮಾಡುವುದು ಆರಂಭವಾಯಿತು. ಅದಕ್ಕೆ ಹೊಸ ತಾಂತ್ರಿಕ ಸಾಧನಗಳನ್ನು ಬಳಸಲಾಯಿತು.
ಇನ್ನು ಪಕ್ಷಗಳ ಪ್ರಚಾರ ಇಷ್ಟೇ ದಿನ ನಡೆಯಬೇಕು ಎನ್ನುವ ನಿಯಮ ಪಾಲನೆಯಾಗಲಿಲ್ಲ. ಅಭ್ಯರ್ಥಿ ಹಾಗೂ ಅವನ ಪಕ್ಷ ಕೇವಲ ಮೂರು ವಾರಗಳ ಪ್ರಚಾರ ಮಾಡಬೇಕು ಎನ್ನುವುದನ್ನು ಯಾವ ಪಕ್ಷವೂ ಪಾಲಿಸಲಿಲ್ಲ. ಸಾಮಾಜಿಕ ಜಾಲತಾಣಗಳ ಪ್ರಚಾರವನ್ನೂ ಸೇರಿಸಿದರೆ ಅದು ಸರಿ ಸುಮಾರು ಎರಡು ವರ್ಷ ನಡೆಯಿತು.
ಚುನಾವಣೆ ಮುಗಿದು ಮೂರು ವರ್ಷವಾಗಲು ಬಂದರೂ ಸಹ ಪ್ರಚಾರದ ಶಾಖ ಕಮ್ಮಿಯಾಗಿಲ್ಲ. ಚುನಾವಣಾ ಆಯೋಗ ತನ್ನ ಕೆಲಸ ಮುಗಿಸಿ ಮರೆತು ಬಿಟ್ಟರೂ ಸಾಮಾಜಿಕ ಜಾಲ ತಾಣಗಳು ಅದನ್ನು ಇನ್ನೂ ಜಾರಿಗಿಟ್ಟಿವೆ. ಇದು ನಮ್ಮ ಸಮಯವನ್ನು ಹಾಳು ಮಾಡಿದೆ, ವರ್ಷಾನು ಗಟ್ಟಲೇ ಜೊತೆಗೆ ಬೆಳೆದವರ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ಅವರ ದೋಸ್ತಿ ಹಾಳು ಮಾಡಿದೆ.
ಇದೆಲ್ಲದರ ಹಿಂದೆ ಇರುವುದು ಸತ್ಯಾಸತ್ಯತೆ ಹಾಗೂ ವಿಶ್ವಾಸರ್ಹತೆಯ ಪ್ರಶ್ನೆ. ನಾವು ಯಾವ ಸುದ್ದಿಗಳನ್ನು ಹೆಚ್ಚು ನಂಬುತ್ತೇವೆ? - ಪತ್ರಿಕೆ, ಟೀವಿ, ರೇಡಿಯೋ ದಲ್ಲಿ ಬಂದ ವಿಷಯಗಳ ನ್ನೋ ಅಥವಾ ನವ ಮಾಧ್ಯಮಗಳಲ್ಲಿ ಹರಿದಾಡುವ ವಿಷಯಗಳನ್ನೋ?
ಪತ್ರಿಕೆಗಳಲ್ಲಿ ಒಂದು ವಿಷಯ ಕಣ್ತಪ್ಪಿನಿಂದಾಗಿ ಛಾಪಿಸಿದಾಗ ನ್ಯಾಯಾಲಕ್ಕೆ ಓಡುವ ನಾವು ನವ ಮಾಧ್ಯಮಗಳಲ್ಲಿನ ತಪ್ಪು ಗಳನ್ನು ಅಷ್ಟೇ ತೀವೃವಾಗಿ ವಿರೋಧಿಸುತ್ತೇವೆಯೇ? ಎಲ್ಲದಕ್ಕೂ ಸಂಪಾದಕರು ಅಥವಾ ವರದಿಗಾರರನ್ನು ಹೊಣೆ ಮಾಡುವ ನಾವು ವಾಟ್ಸಪ್ಪಿನಲ್ಲಿ ಬಂದ ಸುದ್ದಿಯ ಮೂಲವನ್ನು ಹುಡುಕುವ ಪ್ರಯತ್ನ ಮಾಡುತ್ತೇವೆಯೇ?
ಅದ ರ ಜವಾಬ್ದಾರಿಯನ್ನು ಅವರಿಗೆ ಅಂಟಿಸುತ್ತೇವೆಯೇ? ಆ ಸುದ್ದಿಯನ್ನು ಹುಟ್ಟು ಹಾಕಿದವರಿಂದ ಉತ್ತರಗಳನ್ನು ಬಯಸುತ್ತೆವೆಯೇ? ಇವು ನಮಗೆ ನಾವೇ ಕೇಳಿಕೊಳ್ಳ ಬೇಕಾದ ಪ್ರಶ್ನೆಗಳು.
ಸೈಬರ್ ಜಗಳ
ವಿಚಾರ ವ್ಯತ್ಯಾಸ ದಿಂದ ಸಂಬಂಧ ಗಳು ಹಾಳಾಗುವುದು ಹೊಸದೇನಲ್ಲ. ಸವಣೂರು ನವಾಬನ ಆಸ್ತಿಯ ಬಗ್ಗೆ ವಾದ ಮಾಡಿ ಅಣ್ಣ – ತಮ್ಮ ಬೇರೆಯಾದರು ಎನ್ನುವುದು ನಮ್ಮ ಊರಿನ ಕಡೆಯ ಹಳೆಯ ಗಾದೆ ಮಾತು. ಆದರೆ ನಮ್ಮ ಅರಿವು ಹೆಚ್ಚಿದಂತೆ, ಎಲ್ಲರಿಗೂ ಸಾಕಷ್ಟು ಮಾಹಿತಿ ಹೆಚ್ಚು ದೊರಕಿದಂತೆ ಇಂತಹ ಅಕಾರಣ ಜಗಳಗಳು ಜಾಸ್ತಿ ಆಗುತ್ತಿವೆ. ಇದು ಕಳವಳದ ಸಂಗತಿ.
ಫೇಸುಬುಕ್ಕಿನಿಂದಾಗಿ ಅನೇಕ ವರ್ಷಗಳಿಂದ ಕಳೆದು ಹೋದ ಸುಮಾರು ಸ್ನೇಹಿತರನ್ನು ಪಡೆದುಕೊಂಡೆ ಎನ್ನುವ ಮಾತನ್ನು ನಾವು ಇಲ್ಲಿಯವರೆಗೆ ಕೇಳುತ್ತಿದ್ದೆವು. ಫೇಸುಬುಕ್ಕಿನ ಲ್ಲಿ ನಾನು ಪ್ರಕಟಿಸಿದ ನನ್ನ ವೈಯಕ್ತಿಯ
ಅಭಿಪ್ರಾಯಗಳಿಂದ ಅನೇಕ ವರ್ಷಗಳಿಂದ ನನ್ನ ತುಂಬ ಹತ್ತಿರದ ಸ್ನೇಹಿತರನೇಕರನ್ನು ನಾನು ಕಳೆದುಕೊಂಡೆ ಎನ್ನುವ ಮಾತು ಈಗ ಹೆಚ್ಚಾಗಿ ಕೇಳಿ ಬರುತ್ತಿದೆ.
ಅಭಿಪ್ರಾಯ ಸ್ವಾತಂತ್ರ್ಯವನ್ನೇ ನಿರಾಕರಿಸುವುದು, ತಮ್ಮ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತಪಡಿಸುವವರನ್ನು ದೇಶಧ್ರೋಹಿಗಳು ಎಂದು ಪ್ರತಿಬಿಂಬಿಸುವುದು ಅಪಾಯಕಾರಿ. ಇದು ಜನತಂತ್ರ ವಿರೋಧಿ ನಿಲುವು. ಬಲ -ಎಡಪಂಥೀಯರಿಗಾಗಲೀ, ಮಧ್ಯಮ ಮಾರ್ಗಿಗಳಾಗಲೀ ಎಲ್ಲರಿಗೂ ತಮ್ಮ -ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇರಬೇಕು. ಇದನ್ನು ನಾವು ನೆನಪಿಡಬೇಕು.
ತಪ್ಪುಗಳು
ಕೆಲವು ಉದಾಹರಣೆಗಳ ಮೂಲಕ ಇದನ್ನು ನೋಡೋಣ. ಭಾರತದ ರಾಷ್ಟ್ರಗೀತೆಯನ್ನು ರವೀಂದ್ರನಾಥ ಠಾಕೂರರು ಬರೆದದ್ದು ಇಂಗ್ಲಂಡ್ ದೊರೆಯನ್ನು ಮೆಚ್ಚಿಸಲಿಕ್ಕಾಗಿ ಎನ್ನುವ ಸಂದೇಶವೊಂದು ವಾಟ್ಸಪ್ಪು- ಫೇಸುಬುಕ್ಕಿನ ಗೋಡೆಗಳಲ್ಲಿ ಕೆಲ ವರ್ಷಗಳ ಹಿಂದೆ ಓಡಾಡುತ್ತಿತ್ತು. ಈಗ ಯುನೆಸ್ಕೋ ಸಂಘಟನೆಯು ಜನಗಣ ಮನವು ಅತಿ ಶ್ರೇಷ್ಠ ರಾಷ್ಟ್ರ ಗೀತೆ ಯೆಂದು ಪ್ರಶಸ್ತಿ ನೀಡಿ ಗೌರವಿಸಿದೆ, ಅದು ನಮ್ಮ ಸಕಲ ಭಾರತೀಯ ಮನಸ್ಸೇ ಒಂದು ವ್ಯಕ್ತಿಯ ರೂಪದಲ್ಲಿ ಅವತರಿಸಿದೆ. ಅದಕ್ಕೆ ನಾನು ನಮಸ್ಕರಿಸುತ್ತೇನೆ ಎನ್ನುವ ಅರ್ಥದ ಸಂದೇಶ ಓಡಾಡುತ್ತಿದೆ. ತಮಾಷೆಯಂದರೆ ಹಿಂದಿನ ಸಂದೇಶವನ್ನು ಒಬ್ಬರಿಗೊಬ್ಬರು ಕಳಿಸಿದವರೇ ಇದನ್ನೂ ಕಳಿಸುತ್ತಿದ್ದಾರೆ. ಈ ಎರಡರಲ್ಲಿ ಯಾವುದಾದರೂ ಒಂದು ಸರಿ ಇರಬೇಕಲ್ಲವೇ? ಇಂತಹುದೇ ತದ್ ವಿರುದ್ಧ ವಿಷಯಗಳು ಯಾವುದಾದರೂ ಪತ್ರಿಕೆ ಯಲ್ಲಿ ಪ್ರಕಟವಾಗಿದ್ದರೆ ಆ ಸಂಪಾದಕನ ಗತಿ ಏನಾಗಿರುತ್ತಿತ್ತು?
ಎನ್ ಡಿ ಎ ಸರಕಾರವು ಯೋಜನಾ ಆಯೋಗವನ್ನು ಮುಚ್ಚಿ ನೀತಿ ಆಯೋಗವನ್ನು ಆರಂಭಿಸಿದಾಗ ಅದನ್ನು ಕೆಲವರು ಟೀಕಿಸಿದರು. ಎಂಬತ್ತರ ದಶಕದಲ್ಲಿ ಪ್ರಧಾನಿ ಯಾಗಿದ್ದ ಇಂದಿರಾಗಾಂಧಿಯವರು ಸಹ ಯೋಜನಾ ಆಯೋಗವನ್ನು ಮುಚ್ಚಿದ್ದರು ಎಂದು ನಾನು ಸಾಮಾಜಿಕ ಮಾಧ್ಯಮದಲ್ಲಿ ದಾಖಲಿಸಿದೆ. ಇದನ್ನು ಕೆಲವರು ತೀವೃವಾಗಿ ವಿರೋಧಿಸಿದರು. ಅದಕ್ಕೆ ಪರ- ವಿರೋಧಗಳು ಶುರುವಾಗಿ ದೊಡ್ಡ ಚರ್ಚೆ ನಡೆಯಿತು. ಕೊನೆಗೆ ದೆಹಲಿಯಲ್ಲಿ ನ ಹಿರಿಯ ವಕೀಲರೊಬ್ಬರು ಅದಕ್ಕೆ ಸಂಬಂಧ ಪಟ್ಟಂತೆ ಹೆಚ್ಚಿನ ಮಾಹಿತಿ ನೀಡಿದ ಮೇಲೆ ಅದು ಅಲ್ಲಿಗೆ ನಿಂತಿತು.
ಹೈದರಾಬಾದು ವಿಶ್ವವಿದ್ಯಾಲಯದಲ್ಲಿ ರೊಹಿತ ವೆಮುಲಾ ಅವರು ವ್ಯವಸ್ಥೆಯ ಕ್ರೂರತೆಗೆ ಬಲಿಯಾದರು ಎನ್ನುವ ಸುದ್ದಿ ಬಂದಾಗ ನನ್ನ ಸ್ನೇಹಿತರೊಬ್ಬರು ತುರ್ತು ಪರಿಸ್ಥಿತಿಯ ಕಾಲದಲ್ಲಿ ಪೋಲಿಸ್ ಕ್ರೂರತೆ ಬಲಿಯಾದರು ಎನ್ನಲಾದ ಕೇರಳದ ರಾಜನ್ ವಾರಿಯರ್ ಅವರ ಕತೆಯನ್ನು ಜಾಲತಾಣವೊಂದರಲ್ಲಿ ಹಾಕಿದ್ದರು. ಆ ಎರಡೂ ಘಟನೆಗಳು ಬೇರೆ ಬೇರೆಯಾಗಿದ್ದು, ಅವುಗಳನ್ನು ಹೋಲಿಸಬಾರದು ಎಂದು ಅವರೊಂದಿಗೆ ಜಗಳಕ್ಕೆ ಬಿದ್ದರು. ಈಗ ಇಷ್ಟೆಲ್ಲಾ ಮಾತನಾಡುವ ನೀವು ಆವಾಗ ಯಾಕೆ ಸುಮ್ಮನಿದ್ದಿರಿ ಎಂದು ಕೇಳಿದರು. ಆ ಘಟನೆಯನ್ನು ಪ್ರಸ್ತಾಪಿಸಿದ ಹಿರಿಯರು ಯಾವುದೇ ಪಕ್ಷಕ್ಕೆ ಸೇರದವರಾಗಿರಲಿಲ್ಲ ವಾದರೂ ಅವರನ್ನು ನೀವು ಈ ಪಕ್ಷದವರು, ಅದಕ್ಕೇ ಇದನ್ನು ವಿರೋಧಿಸುತ್ತಿದ್ದೀರಿ ಎಂದು ಆರೋಪಿಸಿದರು.
ಎರಡೂ ಘಟನೆಗಳಲ್ಲಿ ಯುವ ಜನರು ವ್ಯವಸ್ಥೆಯ ಕಾಲ ಕೆಳಗೆ ಸಿಕ್ಕು ಜಜ್ಜಿ ಹೋಗಿದ್ದರು, ಎನ್ನುವ ಸರಳ ಸತ್ಯವಾಗಲೀ, ಎರಡೂ ಬಾರಿಯೂ ನಾಗರಿಕರಿಗೆ ಸರಕಾರದ ವಿರುದ್ಧ ಪ್ರತಿಭಟಿಸುವ ಹಕ್ಕು ಇದೆ ಎನ್ನುವ ತರ್ಕ ವಾಗಿಲೀ ಎರಡೂ ಕಡೆಯವರಿಗೆ ಹೊಳೆಯಲಿಲ್ಲ. ಹಿಂಸೆ ಅಥವಾ ದುರಾಚಾರ ದ ನೋವನ್ನು ಪ್ರತಿ ಹಿಂಸೆ ಕಡಿಮೆ ಮಾಡುವುದಿಲ್ಲ ಎಂದು ಇಬ್ಬರಿಗೂ ಅನ್ನಿಸಲಿಲ್ಲ.
ಇತರ ಜಾಲ ತಾಣಗಳು ಹಾಗಿರಲಿ. ದಿನದಿಂದ ದಿನಕ್ಕೆ ವಿಶ್ವಾಸರ್ಹತೆ ಹೆಚ್ಚಿಸಿಕೊಳ್ಳುತ್ತಿರುವ, ಸಾವರ್ಜನಿಕರೇ ಸಂಪಾದಕರಾಗಿರುವ ವಿಕಿಪಿಡಿಯಾದ ಉದಾಹರಣೆ ಯನ್ನೇ ತೆಗೆದುಕೊಳ್ಳೋಣ. ಕೆಲವು ವರ್ಷಗಳ ಹಿಂದೆ ಜ್ಞಾನಪೀಠ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂದು ಯಾರೋ ಬರೆದಿದ್ದನ್ನು ನೋಡಿದ ಹಿರಿಯ ಪತ್ರಕರ್ತ ನಲ್ಲೂರು ಇಸ್ಮಾಯಿಲ್ ಅವರು ಅದು ಖಾಸಗಿ ಪ್ರತಿಷ್ಟಾನ ವೊಂದು ನೀಡುವ ಪ್ರಶಸ್ತಿ ಎಂದು ತಿದ್ದಿದರು. ಆದರೆ ಅದನ್ನು ಸರಕಾರಿ ಪ್ರಶಸ್ತಿ ಎಂದು ತಿದ್ದಲಾಯಿತು. ಇವರು ಮತ್ತೆ ತಿದ್ದಿದರು. ಅದನ್ನು ಮತ್ತೆ ತಿದ್ದಲಾಯಿತು. ಈಗ ಅದು ಸರಿಯಾಗಿದೆ.
ಈ ಜಾಲತಾಣಗಳಲ್ಲಿನ ಇಂತಹ ಜಗಳಗಳನ್ನು ನೋಡಿದಾಗ, ಎಲ್ಲರೂ ತಮ್ಮದೇ ಸರಿ ಎಂದು ವಾದಿಸತೊಡಗಿದಾಗ ನನ್ನಲ್ಲಿ ಈ ಪ್ರಶ್ನೆ ಮೂಡುತ್ತದೆ. ಇವಕ್ಕೆ ಸಾಮಾಜಿಕ ಜಾಲತಾಣಗಳು ಎನ್ನಬೇಕೇ? ಎಲ್ಲರೂ ತಮ್ಮ ಮೂಗಿನ ನೇರಕ್ಕೇ ಮಾತಾಡುವುದಾದರೆ ಇವಕ್ಕೆ ವೈಯಕ್ತಿಕ ಜಾಲತಾಣಗಳು ಎನ್ನಬಾರದೋ ಅನ್ನಿಸುತ್ತದೆ. ಹಳ್ಳಿಯ ಚಹಾ ಅಂಗಡಿಯಲ್ಲಿ ವಿಭಿನ್ನ ಅಭಿಪ್ರಾಯಗಳಿಗೆ ಇರುವಷ್ಟು ಅವಕಾಶ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡು ಬರುತ್ತಿಲ್ಲ. ಬಹುಶಃ ತಮ್ಮ ಪ್ರತಿವಾದಿ ನಮ್ಮ ಎದುರಿಗೆ ಭೌತಿಕವಾಗಿ ಇಲ್ಲ ಎನ್ನುವುದು ನಮ್ಮನ್ನು ತುಂಬ ಅಮಾನವೀಯವಾಗಿ ಮಾತಾಡುವಂತೆ ಪ್ರೇರೇಪಿಸುತ್ತದೆ ಅನ್ನಿಸುತ್ತದೆ.
ಜ್ಞಾನ ವೆನ್ನುವುದು ನನ್ನನ್ನು ಉತ್ತಮ ಮನುಷ್ಯನನ್ನಾಗಿ ಮಾಡದಿದ್ದರೆ ಅದು ಜ್ಞಾನವೇ ಅಲ್ಲ, ಎನ್ನುವ ಸಂಸ್ಕೃತದ ಮಾತೊಂದಿದೆ. ನಾವು ಈಗ ಸಾಮಾಜಿಕ ಮಾಧ್ಯಮ ಅಥವಾ ವಿವಿಧ ಜಾಲ ತಾಣಗಳಿಂದ
ಕೆಲವು ವರ್ಷಗಳ ಹಿಂದೆ ಕಲಬುರ್ಗಿಯಲ್ಲಿ ನ್ಯಾಯಾಧೀಶರೊಬ್ಬರು ಪತ್ರಕರ್ತರ ಬಗ್ಗೆ ಹೇಳಿದ ಮಾತೊಂದು ವಿವಾದಕ್ಕೆ ಈಡು ಮಾಡಿತ್ತು. `` ಈ ದೇಶದಲ್ಲಿ ಯಾವುದೇ ವಿದ್ಯಾರ್ಹತೆ ಇಲ್ಲದೇ ಹಾಗೂ ಯಾವುದೇ ತರಬೇತಿ ಇಲ್ಲದೇ ಮಾಡಬಹುದಾದ ಕೆಲಸವೆಂದರೆ ಪತ್ರಿಕೋದ್ಯಮ’’ ಎಂದು ಅವರು ಫರಮಾನು ಕೊಟ್ಟರು. ಆ ಕಾರ್ಯಕ್ರಮದಲ್ಲಿ ಇದ್ದ ಹಿರಿಯ ಪತ್ರಕರ್ತ ಆನಂದ ಯಮನೂರು ಅವರು ಅದನ್ನು ತೀವೃವಾಗಿ ವಿರೋಧಿಸಿದರು. ಅಲ್ಲಿದ್ದ ವಕೀಲರಿಗೂ ನಮ್ಮವರಿಗೂ ಝಟಾಪಟಿ ನಡೆಯಿತು. ಅದು ನಡೆಯುತ್ತಲೆ ಇರುತ್ತದೆ. ಅದರಲ್ಲಿ ಏನೂ ಆಶ್ಚರ್ಯ ಇಲ್ಲ. ಮರುದಿನ ಪತ್ರಿಕೆಗಳಲ್ಲಿ ಸುದ್ದಿ ಆಯಿತು. ಈ ಪೇಪರಿನವರಿಗೆ ಯಾವುದೇ ತರಬೇತಿ ಇರೊದಿಲ್ಲ. ಬೇಕಾಗಿಯೂ ಇಲ್ಲ, ಎನ್ನುವಂತಹ ಹಗುರವಾದ ಮಾತುಗಳನ್ನು ಕೆಲವು ಜನ ಆಡುತ್ತಲೇ ಇರುತ್ತಾರೆ. ಅದರ ಮಧ್ಯದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯವರು ಇಂತಹ ತರಬೇತಿಗಳನ್ನು ಏರ್ಪಡಿಸಿದ್ದು ಅಭಿನಂದನಾರ್ಹ.
ರೋಹಿಣಿ ಅವರು ಹಾಗೂ ಶಂಕರಪ್ಪ ನವರು ನನಗೆ ಆಹ್ವಾನ ನೀಡಿದಾಗ ಜಾತ್ರೆಗೆ ಹೊರಟ ಮಗುವಿನಂತೆ ನಾನು ಕೈತಟ್ಟಿ ಖುಷಿ ಪಟ್ಟೆ. ಆದರೆ ಈ ಕಾರ್ಯಕ್ರಮದಲ್ಲಿ ಡಾ. ನಾರಾಯಣ ಗಟ್ಟಿ ಅವರಂತಹ ಚಿಂತಕರೂ, ದೇವ ಪತ್ತಾರರಂತಹ ಬಹು ವಿಧದ ಓದಿನವರೂ ಮಾತಾಡಿದ್ದಾರೆ. `ವ್ಯಾಸೋಚ್ಛಿಷ್ಟಂ ಜಗತ್ ಸರ್ವಂ’ ಎಂಬಂತೆ ಅವರು ಮಾತಾಡಿದ ಮೇಲೆ ಉಳಿದದ್ದೇನು ಅಂತಲೂ ಅನ್ನಿಸುತ್ತದೆ. ಆದರೆ ಅನ್ನಿಸಿದ್ದನ್ನು ಹೇಳಿದ ಮೇಲೆ ಮನಸು ಹಗುರವಾಗುತ್ತಿದೆ.
``ತೀರ್ಥಯಾತ್ರೆ ಎಂದರೆ ಆಪ್ತೇಷ್ಟರ ಭೇಟಿಯಲ್ಲದೇ ಇನ್ನೇನು’’ ಎನ್ನುವ ಸುಭಾಷಿತ ವಿದೆ. ಅಂತೆಯೇ ಇಲ್ಲಿಗೆ ಬಂದು ನಿಮ್ಮೆಲ್ಲರನ್ನು ಭೇಟಿ ಆಗುತ್ತಿರುವುದು ನನಗೆ ತುಂಬ ಖುಷಿಯಾಗಿದೆ.
ಅಕಾಡೆಮಿ ಅಧ್ಯಕ್ ಸಿದ್ಧರಾಜ್ ಸರ್, ಸದಸ್ಯ ಗುಡಿಹಳ್ಳಿ ನಾಗರಾಜ ಸರ್, ಕಾರ್ಯದರ್ಶಿ ಶಂಕರಪ್ಪ, ವಾರ್ತಾಧಿಕಾರಿಗಳಾದ ಕೆ. ರೋಹಿಣಿ, ಜಿಲ್ಲಾ ಪತ್ರಕರ್ತ ರ ಸಂಘದ ಪದಾಧಿಕಾರಿಗಳು, ಸದಸ್ಯರು, ಸಂಪನ್ಮೂಲ ವ್ಯಕ್ತಿಗಳು, ಭಾಗವಹಿಸಿದವರು, ಹಾಗೂ ಕಾರ್ಯಾಗಾರಕ್ಕೆ ಕಾರಣರಾದ ಇತರ ಎಲ್ಲರಿಗೂ ಧನ್ಯವಾದಗಳು.
---
Comments