ಸರಕಾರಿ ಶಾಲೆಗಳನ್ನು ನಮ್ಮಿಂದ ಉಳಿಸಿಕೊಳ್ಳಲಾದೀತೆ?
ಸರಕಾರಿ ಶಾಲೆಗಳನ್ನು ನಮ್ಮಿಂದ ಉಳಿಸಿಕೊಳ್ಳಲಾದೀತೆ?
ಸುಮಾರು ಹತ್ತು ವರ್ಷದ ಹಿಂದಿನ ಮಾತು. ಅಮೇರಿಕೆಯ ಫ್ಲೊರಿಡಾ ರಾಜ್ಯದ ನಗರವೊಂದರ ಪುರಭವನದಲ್ಲಿ ಒಂದು ಸಂಜೆ ಊರಿನ ಜನರೆಲ್ಲಾ ಖುಷಿಯಿಂದ ಮೆರೆದಿದ್ದರು. ಅದು ಹೊಸದಾಗಿ ಚುನಾಯಿತರಾದ ಮಹಾ ಪೌರರನ್ನು ಅಭಿನಂದಿಸುವ ಕಾರ್ಯಕ್ರಮ. ರೋಟರಿ ಇಂಟರನ್ಯಾಷನಲ್ ಸಂಸ್ಥೆಯ `ಜಿಎಸ್ಈ’ ಸಾಂಸ್ಕ್ರತಿಕ ವಿನಿಮಯದ ಅಂಗವಾಗಿ ಭಾರತದಿಂದ ಅಲ್ಲಿಗೆ ತೆರಳಿದ್ದ ನಮ್ಮ ಐದು ಜನರ ತಂಡಕ್ಕೂ ಅಲ್ಲಿಗೆ ಆಹ್ವಾನವಿತ್ತು. ಆದರೆ ಅಲ್ಲಿಗೆ ಮಹಾಪೌರರು ಆಗಮಿಸಿ ಕೆಲವು ನಿಮಿಷಗಳಾದರೂ ಕಾರ್ಯಕ್ರಮ ಆರಂಭವಾಗಿರಲಿಲ್ಲ. ನಮಗೋ ಆಶ್ಚರ್ಯ. “ಮುಖ್ಯ ಭಾಷಣಕಾರರು ಇನ್ನೂ ಬಂದಿಲ್ಲ, ಇನ್ನು ಐದು- ಹತ್ತು ನಿಮಿಷಗಳಲ್ಲಿ ಬಂದು ಬಿಡುತ್ತಾರೆ,’’ ಎಂದು ನಮ್ಮ ಅತಿಥೇಯರಾದ ಪ್ರೊ. ಕಾರ್ಲ್ ಬೆಕಮೆನ್ ತಿಳಿಸಿದರು. `ಸಮಾರಂಭಗಳು ತಡವಾಗೋದು ನಮಗೇನೂ ಹೊಸದಲ್ಲ ಬಿಡಿ. ಆದರೆ ನಮ್ಮಲ್ಲಿ ರಾಜಕಾರಣಿಗಳೇ ತಡವಾಗಿ ಬರೋದು. ಇಲ್ಲಿ ರಾಜಕಾರಣಿಗಳು ಬಂದಮೇಲೂ ನೀವು ಬೇರೆಯವರಿಗೆ ಕಾಯುತ್ತಿದ್ದೀರಲ್ಲಾ, ಅದು ಮಜಾ ಅನ್ನಿಸಿದೆ’ ಅಂದೆ ನಾನು. `ಅಯ್ಯೋ ಇಂದಿನ ಅತಿಥಿಗಳು ರಾಜಕಾರಣಿಗಿಂತಲೂ ಮುಖ್ಯವಾದವರು. ಹೇಗೆ ಅಂತ ಇನ್ನೊಂದು ಸ್ವಲ್ಪ ಸಮಯದಲ್ಲಿ ನಿಮಗೇ ಗೊತ್ತಾಗತ್ತೆ ಇರಿ,’ ಅಂತ ಅವರು ನಸು ನಕ್ಕರು.
ಆಗ ಬಂದವರು ಜೆಫ್ ಕ್ಲಿಂಟ್. “ಸುಮಾರು ಹದಿನೈದು ನಿಮಿಷ ನನಗೆ ಸಕಾರಣವಾಗಿ ತಡವಾಗಿದೆ. ಅದಕ್ಕೆ ಕ್ಷಮೆ ಇರಲಿ,’’ ಎನ್ನುತ್ತಾ ಮಾತು ಆರಂಭಿಸಿದರು. “ಇಲ್ಲಿಗೆ ಬರುವ ಮೊದಲು ನಾನು ನನ್ನ ಮಗನನ್ನು ಶಾಲೆಯಿಂದ ಕರೆತರಲು ಹೋಗಿದ್ದೆ. ಅವನು “ನಾನು ನನಗೆ ತುಂಬಾ ಇಷ್ಟವಾಗುವ ವ್ಯಕ್ತಿಯ ಚಿತ್ರ ಬರೆಯುತ್ತಿದ್ದೇನೆ, ಸ್ವಲ್ಪ ಕಾಯಿರಿ’’ ಅಂತಂದ. ನಾನು ನನ್ನದೇ ಚಿತ್ರ ಬರೆಯುತ್ತಿದ್ದಾನೇನೋ ಅಂದು ಕೊಂಡು ಒಳಗೋಳಗೇ ಸಂಭ್ರಮಿಸುತ್ತಿದ್ದರೆ, ಅವನು ತನ್ನ ಫುಟಬಾಲ್ ಕೋಚಿನ ಚಿತ್ರ ತೆಗೆದ. ಇಷ್ಟೊತ್ತು ಕಾಯ್ದಿದ್ದಕ್ಕೂ ಒಳ್ಳೆ ಫಲ ಸಿಕ್ಕಿದಂತಾಯಿತು’’ ಎಂದು ನಗೆ ಚಟಾಕಿ ಹಾರಿಸಿದರು.
govtshlಆ ನಗರದ ಯಶಸ್ವೀ ಉದ್ದಿಮೆದಾರರೂ, ಕೋಟ್ಯಾಧೀಶ್ವರರೂ, ಮಾಜಿ ಸಂಸತ್ ಸದಸ್ಯರ ಮಗನೂ ಆಗಿದ್ದ ಅವರು ಸ್ವಾರಸ್ಯಕರ ಕತೆಯೊಂದನ್ನು ಹೇಳಿದರು. ಕೆಲವು ತಿಂಗಳುಗಳ ಹಿಂದೆ ಈ ನಗರದ ಮಹಾ ಪೌರರ ಚುನಾವಣೆ ಘೋಷಣೆಯಾದಾಗ ನಾನು ಅದರಲ್ಲಿ ಸ್ಪರ್ಧಿಸಬೇಕು ಎಂದು ನನ್ನ ಅನೇಕ ಹಿತೈಷಿಗಳೂ, ಸ್ನೇಹಿತರೂ, ನನ್ನನ್ನು ಒತ್ತಾಯಿಸಿದರು. ರಿಪಬ್ಲಿಕನ್ ಪಕ್ಷದ ಕೆಲವು ಸದಸ್ಯರಂತೂ ತಮ್ಮ ಪಕ್ಷದ ಸಭೆಗಳಲ್ಲಿ ನನ್ನ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾಗಿ ತಿಳಿಸಿದರು. ಒಂದು ಕೈ ನೋಡೇ ಬಿಡೋಣ ಅಂತ ನನಗೂ ಅನ್ನಿಸತೊಡಗಿತು. ನನಗೀಗ ಸುಮಾರು 45 ವರ್ಷ. ಹೀಗೆ ರಾಜಕಾರಣದಲ್ಲಿ ಮುಂದುವರೆದರೆ ಮುಂದೆ ದೇಶದ ಸಂಸತ್ ಸದಸ್ಯನಾಗ ಬಹುದು, ಅಂತಲೂ ಅನ್ನಿಸಿತು.
ರಾತ್ರಿಯ ಊಟದ ಸಮಯದಲ್ಲಿ ನನ್ನ ಕುಟುಂಬದ ಸದಸ್ಯರೆದುರು ಇದನ್ನು ಘೋಷಿಸಿದೆ. ಆದರೆ ಪ್ರೌಡಶಾಲೆ ಯಲ್ಲಿ ಇರುವ ನನ್ನ ಹಿರಿಯ ಮಗಳು ತಮ್ಮ ಶಾಲೆಯ ಆಡಳಿತ ಮಂಡಳಿಯ ಚುನಾವಣೆ ಇಷ್ಟರಲ್ಲೇ ಬರಲಿದೆ ಎಂದೂ, ನಾನು ನಗರ ಪಾಲಿಕೆ ಚುನಾವಣೆ ಗಿಂತ ಅದನ್ನು ಎದುರಿಸುವುದೇ ಒಳ್ಳೆಯದೇನೋ ಎಂದು ಸೂಕ್ಷ್ಮವಾಗಿ ಸೂಚಿಸಿದಳು. “ನನ್ನ ಪ್ರಕಾರ ಮಹಾಪೌರನಾಗುವುದು ಸರಳ. ಶಾಲೆ ನಡೆಸುವುದು ಕಷ್ಟ. ಉದ್ದಿಮೆಯಲ್ಲಿ ಇಷ್ಟೊಂದು ಯಶಸ್ಸು ಗಳಿಸಿದ ನಿಮ್ಮಂಥವರು ಶಿಕ್ಷಣ ಕ್ಷೇತ್ರದಲ್ಲೂ ಕೈಆಡಿಸಿ ನೋಡಿ. ಅಲ್ಲಿಯ ಸವಾಲುಗಳನ್ನು ಎದುರಿಸಲು ನಿಮ್ಮಂಥವರ ಜರೂರತ್ತು ಇರಬಹುದೇನೋ’’ ಅಂತ ಬೇರೆ ಒಗಟಿನ ಮಾತು ಹೇಳಿಬಿಟ್ಟಳು.
“ನಮ್ಮ ಮಗಳು ದೂಡ್ಡವಳಾಗುತ್ತಿದ್ದಾಳೆ. ಅವಳ ಸೂಚನೆ ಯನ್ನೂ ನೀವಿನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಮೇಲು,’’ ಎಂದು ನನ್ನ ಹೆಂಡತಿ ಕಾರ್ಲಾ ಹೇಳಿದಳು. ಕಚೇರಿಯಲ್ಲಿ ನನಗೆ ಆತ್ಮೀಯರಾದವರೊಬ್ಬರು “ನಾನು ನಿನ್ನ ಜಾಗದಲ್ಲಿ ಇದ್ದರೆ ಮಗಳ ಮಾತನ್ನೇ ಕೇಳುತ್ತಿದ್ದೆ’’ ಎಂದು ಹೇಳಿದರು. ಮಹಾಪೌರನಾಗಿ ಸಭೆ ಸಮಾರಂಭಗಳಲ್ಲಿ ಭಾಷಣ ಮಾಡುತ್ತಾ, ಹಿಂದೆ ಮುಂದೆ ಮೂರು ನಾಕು ಕಾರುಗಳ ಜಾತ್ರೆಯಲ್ಲಿ ಮೆರೆಯುವ ಕನಸು ಕಾಣತೊಡಗಿದ್ದ ನನಗೆ `ಇದೇನಪ್ಪಾ, ನಮ್ಮವರದೇ ನನಗೆ ಬೆಂಬಲವಿಲ್ಲವಲ್ಲಾ’ ಎಂದು ಕೊಂಡೆ. ಕುಟುಂಬ ಸದಸ್ಯರೊಡನೆ ಎರಡು ಮೂರು ಬಾರಿ ಚರ್ಚೆ ನಡೆಸಿದರೂ ಗೊಂದಲ ಬಗೆ ಹರಿಯಲಿಲ್ಲ. ಕೊನೆಗೆ ನಮ್ಮ ತಂದೆ ಯನ್ನು ಭೇಟಿ ಯಾಗಿ ಈ ಸಮಸ್ಯೆಯ ಪರಿಹಾರ ಕೇಳೊಣ ಎಂದುಕೊಂಡೆವು. ನಮ್ಮ ತಂದೆ ತಾಯಿ ವಾಸವಾಗಿರುವ ನಮ್ಮ ಹಳ್ಳಿಯ ತೋಟದ ಮನೆಗೆ ಹೋಗುವ ನಿರ್ಧಾರ ಮಾಡಿದೆವು. ಬಹಳ ದಿನದ ನಂತರ ಫ್ಯಾಮಿಲಿ ಪಿಕ್ ನಿಕ್ ನ ಅವಕಾಶ ಸಿಕ್ಕಿದೆ ಎಂದು ನನ್ನ ಮೂವರು ಮಕ್ಕಳೂ ನಮ್ಮ ಜೊತೆ ಬರುವ ನಿರ್ಧಾರ ಮಾಡಿದರು. ಒಂದು ಇಡೀ ದಿನದ ಹೆದ್ದಾರಿ ಪ್ರಯಾಣದ ನಂತರ ನಮ್ಮೂರಿಗೆ ಹೋದೆವು. ನಮ್ಮ ಹಟಾತ್ ಭೇಟಿಯಿಂದ ನಮ್ಮಪ್ಪ – ಅಮ್ಮ ಖುಷಿಯಾದರು. ಮಕ್ಕಳ ಸಂತೋಷಕ್ಕಂತೂ ಪಾರವೇ ಇರಲಿಲ್ಲ.
ಸಂಜೆ ವಾಕಿಂಗ್ ಹೋದಾಗ ನಾನು ನಿಧಾನವಾಗಿ ಅಪ್ಪ ನ ಮುಂದೆ ಈ ವಿಷಯ ತೆಗೆದೆ. “ಈ ವರ್ಷ ಚುನಾವಣೆ ನಿಲ್ಲಬೇಕೆಂದಿದ್ದೇನೆ. ನನ್ನ ಮಾನಸಿಕ ತಯಾರಿ ಆರಂಭವಾಗಿದೆ. ನಮ್ಮ ಬಿಸಿನೆಸ್ ಜವಾಬ್ದಾರಿ ಯನ್ನು ಸ್ವಲ್ಪ ಕಡಿಮೆ ಮಾಡಿಕೊಂಡಿದ್ದೇನೆ. ಚುನಾವಣೆ ನಿಲ್ಲುವುದೇನೋ ಖಚಿತ. ಆದರೆ ಯಾವ ಚುನಾವಣೆ ಎನ್ನುವದೇ ಸಮಸ್ಯೆಯಾಗಿದೆ. ನನ್ನ ನಗರವೋ, ನನ್ನ ಮಕ್ಕಳ ಶಾಲೆಯೋ? ಯಾವದನ್ನು ಆಯ್ದುಕೊಳ್ಳಲಿ?’’ ಎಂದೆ. “ಇದರಲ್ಲಿ ಸಮಸ್ಯೆ ಏನಿದೆ? ನೀನು ಶಾಲೆಯನ್ನೇ ಆಯ್ದುಕೊಳ್ಳಬೇಕು,’’ ಎಂದು ಅವರು ನಕ್ಕರು. “ನಗರವನ್ನು ನೋಡಿಕೊಳ್ಳಲು ಬಹಳ ಜನ ಇದ್ದಾರೆ. ನಿಮ್ಮ ಹುಡುಗರ ಶಾಲೆಯನ್ನು ನೀನೇ ನೋಡಬೇಕು, ಅಂತಹ ಗುರುತರ ಜವಾಬ್ದಾರಿಯನ್ನು ಬೇರೆಯವರ ಮೇಲೆ ಹಾಕುವುದು ತರವೇ?’’ ಎಂದು ನನ್ನನ್ನೇ ಪ್ರಶ್ನಿಸಿದರು.
“ಕೊನೆಗೆ ನಾನು ಶಾಲೆ ಆಡಳಿತ ಮಂಡಳಿ ಚುನಾವಣೆ ನಿಂತು ಗೆದ್ದೆ. ಇತರ ಸದಸ್ಯರ ಸಹಯೋಗದಿಂದ ಅದರ ಆಡಳಿತದಲ್ಲಿ ಅನೇಕ ಬದಲಾವಣೆಗಳನ್ನು ತಂದೆವು. ಇದರ ಬಗ್ಗೆ ನನಗೆ ನಿಜವಾಗಿಯೂ ತೃಪ್ತಿ ಇದೆ. ಇಂತಹ ಆಮೂಲಾಗ್ರ ಬದಲಾವಣೆಗಳನ್ನು ನಾನು ನಗರದ ಆಡಳಿತ ಮಂಡಳಿಯಲ್ಲಿಯೂ ಮಾಡಲು ಸಾಧ್ಯವಿತ್ತೋ ಇಲ್ಲವೋ. ಇದ್ದರೂ ಸಹ ಇಷ್ಟು ತೃಪ್ತಿ ಸಿಗುತ್ತಿರಲಿಲ್ಲ ಅನ್ನಿಸುತ್ತದೆ. ನನ್ನ ಮಗಳು, ಹೆಂಡತಿ, ತಂದೆ ಹಾಗು ಇತರ ಸ್ನೇಹಿತರು ಶಾಲೆಗೆ ಯಾಕೆ ಆದ್ಯತೆ ನೀಡುವಂತೆ ಒತ್ತಾಸೆ ಮಾಡಿದರು ಎನ್ನುವುದು ನಿಧಾನವಾಗಿ ನನಗೆ ಹೊಳೆಯಲಾರಂಭಿಸಿತು,’’ ಅಂತ ಅವರು ಭಾಷಣ ಮುಗಿಸಿದರು.
“ಜೆಫ್ ಅವರೇನಾದರೂ ಚುನಾವಣೆಗೆ ನಿಂತಿದ್ದರೆ ನಾನು ಚುನಾವಣೆಯ ಸಮೀಪವೂ ಬರುತ್ತಿರಲಿಲ್ಲ,’’ ಎನ್ನುತ್ತ ಹೊಸ ಮಹಾಪೌರರು ಮಾತು ಶುರುಮಾಡಿದರು. “ಅವರಂಥವರು ಶಾಲಾ ಆಡಳಿತ ಮಂಡಳಿಗಳಲ್ಲಿ ಇದ್ದರೆ ನಗರ ಪಾಲಿಕೆಯ ಶಿಕ್ಷಣ ಕ್ಷೇತ್ರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ,’’ ಎಂದರು.
baadami ಇಡೀ ಘಟನೆ ಬಗ್ಗೆ ನನಗೆ ಸಂದೇಹ ಹುಟ್ಟತೊಡಗಿತು. ಇದು ಯಾರೋ ಇಬ್ಬರು ಸಾಹುಕಾರರು ತಮ್ಮ ತಮ್ಮನ್ನು ಹೊಗಳುವ ಸ್ಪರ್ಧೆ ಅಷ್ಟೇ. ಅದರಲ್ಲೂ ಭಾರತದಿಂದ ಬಂದ ಅತಿಥಿಗಳು ಇದ್ದಾರೆ ಎಂದ ಮೇಲೆ ಇನ್ನೂ ಹೆಚ್ಚು ನೈಸಾಗಿ ಮಾತಾಡುತ್ತಿರಬೇಕು ಎಂದುಕೊಂಡೆ. ಆದರೆ ಸಮಾರಂಭದ ನಂತರ ಪ್ರೊ. ಕಾರ್ಲ್ ಬೆಕಮೆನ್ ನಮಗೆ ಜೆಫ್ ನ ಬಗ್ಗೆ ವಿವಿರವಾಗಿ ಹೇಳಿದರು. ಅವನು ಶಾಲಾ ಮಂಡಳಿಯ ಅಧ್ಯಕ್ಷನಾದ ಕೆಲವೇ ತಿಂಗಳುಗಳಲ್ಲಿ ಅನೇಕ ಕ್ರಾಂತಿಕಾರಿ ಬದಲಾವಣೆ ತಂದನಂತೆ. ಶಾಲಾ ವೇಳಾಪಟ್ಟಿ, ಕಲಿಯುವ- ಕಲಿಸುವ ಪ್ರಕ್ರಿಯೆಯ ಗುಣಮಟ್ಟ ಸುಧಾರಣೆ, ಮಧ್ಯಾಹ್ನದ ಊಟ, ಮಕ್ಕಳಿಗೆ ಕಲೆ – ಸಾಹಿತ್ಯ- ನಾಟಕ ತರಬೇತಿ, ಶಿಕ್ಷಕರಿಗೆ ಪುನರ್ ಮನನ ತರಬೇತಿ, ಫೇಲಾದ ಮಕ್ಕಳಿಗೆ ವೃತ್ತಿ ಶಿಕ್ಷಣ, ಪಠ್ಯದಲ್ಲಿ ಜೀವನ ಮೌಲ್ಯ ಗಳ ಅಳವಡಿಕೆ, ಲಿಂಗ ಸಂವೇದನೆ ತರಬೇತಿ, ಮುಂತಾದ ಯೋಜನೆಗಳನ್ನು ಹಮ್ಮಿಕೊಂಡನಂತೆ. ಪಾಲಕರನ್ನೆಲ್ಲ ಸೇರಿಸಿ, ಜೀರ್ಣವಾಗಿ ಹೋಗಿದ್ದ ಊರಿನ ಗ್ರಂಥಾಲಯ ವನ್ನು ಮತ್ತೆ ಆರಂಭಿಸಿದನಂತೆ, ಶಾಲಾ ಮಕ್ಕಳನ್ನು ಅಲ್ಲಿನ ಗೌರವ ಸದಸ್ಯರನ್ನಾಗಿ ಮಾಡಿದನಂತೆ, ಅದಕ್ಕಾಗಿ ಪ್ರತಿಷ್ಟಿತ ಸಂಸ್ಥೆಯೊಂದರಿಂದ ಪ್ರಶಸ್ತಿ ಪಡೆದನಂತೆ, ಇತ್ಯಾದಿ ಸುದ್ದಿ ತಿಳಿಸಿದರು. `ಅವನು ಮನಸ್ಸು ಮಾಡಿದ್ದರೆ ಮೇಯರ್ ಆಗುವುದು ಕಷ್ಟದ ಮಾತೇ ಇರಲಿಲ್ಲ,’ ಎನ್ನುವುದನ್ನು ಪ್ರೊ. ಬೆಕಮನ್ ಒತ್ತಿ ಹೇಳಿದರು.
ಮೇಯರ್ ಗಿರಿ ಬಿಟ್ಟು ಶಾಲೆ ಆಡಳಿತ ಮಂಡಳಿಯ ಅಧ್ಯಕ್ಷ ಪದವಿಯನ್ನು ಆರಿಸಿಕೊಂಡ ನಾಯಕನ ಕತೆ ಹಾಗೂ ಅಂದಿನ ಸಮಾರಂಭ ನನ್ನ ಮೇಲೆ ತುಂಬ ಪರಿಣಾಮ ಬೀರಿತು. ನಮ್ಮ ದೇಶದ ಶಾಲಾ ಆಡಳಿತ ವ್ಯವಸ್ಥೆಯ ಬಗ್ಗೆ ಆಳವಾಗಿ ವಿಚಾರ ಮಾಡುವಂತೆ ಮಾಡಿತು. ನಾನು ತುಂಬ ಸಂದೇಹದಿಂದ ನೋಡುತ್ತಿದ್ದ ಶಾಲಾ ಅಭಿವೃದ್ಧಿ ಮಂಡಳಿಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿತು. ಹತ್ತು ವರ್ಷದ ಹಿಂದೆ ಅಮೇರಿಕೆಯ ಸಣ್ಣ ಊರಿನಲ್ಲಿ ನಡೆದ ಘಟನೆ ನಮ್ಮ ರಾಜ್ಯದ ಸರಕಾರಿ ಶಾಲೆಗಳಿಗೆ, ಪಾಲಕ-ಶಿಕ್ಷಕ-ವಿದ್ಯಾರ್ಥಿ ವೃಂದಕ್ಕೆ, ಒಟ್ಟಾರೆ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಗೆ ಟಾರ್ಚಿನ ಬೆಳಕು ಬಿಟ್ಟು ದಾರಿ ತೋರಬಹುದು ಎಂದು ಅನೇಕ ಸಾರಿ ಅನ್ನಿಸಿದೆ.
ಸರಕಾರಿ ಶಾಲೆಗಳ ವಿಲೀನ, ಮುಚ್ಚುವಿಕೆ ಮುಂತಾದ ಸುದ್ದಿಗಳನ್ನು ನೋಡಿದಾಗಲೆಲ್ಲ ನನಗೆ ಅನೇಕ ಪ್ರಶ್ನೆಗಳು ಕಾಡುತ್ತವೆ. ನಾವು ನಮ್ಮ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಬಹುದೇ ? ಅದು ಹೇಗೆ ಸಾಧ್ಯ- ಪಾಲಕರ ನೆರವಿನಿಂದಲೇ? ಸರಕಾರೇತರ ಸಂಸ್ಥೆಗಳಿಂದಲೇ? ಹೋರಾಟಗಾರರಿಂದಲೇ? ಶಾಲಾಭಿವೃದ್ಧಿ ಮಂಡಳಿ ಯಿಂದಲೇ ಅಥವಾ ಈಗಾಗಲೇ ಸೇವೆ ಸಲ್ಲಿಸುತ್ತಿರುವ ನಮ್ಮ ಶಿಕ್ಷಕ- ಆಡಳಿತಗಾರರ ಮೂಲಕವೇ? ಇದಕ್ಕೆ ಸಂಬಂಧ ಪಟ್ಟಂತೆ ಕೆಲವು ವಿಚಾರಗಳನ್ನು ಹೀಗೆ ಚರ್ಚಿಸಬಹುದೇನೋ.
ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದು ನಮ್ಮನ್ನು ಎಚ್ಚರಿಸುವಂತೆ ಕಾಣುತ್ತದೆ.
ಜಪಾನಿನ ಹಕಾಯಿಡೋ ರೇಲ್ವೆ ಕಂಪನಿ ಕಳೆದ ಮೂರು ವರ್ಷದಿಂದ ಕೇವಲ ಒಬ್ಬ ವಿದ್ಯಾರ್ಥಿನಿ ಶಾಲೆಗೆ ಹೋಗಿ ಬರುವುದಕ್ಕಾಗಿ ರೈಲು ಓಡಿಸುತ್ತಿದೆ.
ಅವಳ ಮನೆ ಹಾಗೂ ಶಾಲೆಯ ಹತ್ತಿರ ಹಾಯ್ದು ಹೋಗುವ ಮಾರ್ಗದ ಮೂಲಕ ದಿನಕ್ಕೆ ಎರಡು ಬಾರಿ ಹೋಗುವ ಆ ರೈಲು ನಷ್ಟದಲ್ಲಿಯೇ ನಡೆಯುತ್ತಿದೆ. ಆದರೆ ಇದರ ಸುದ್ದಿಯಾದಾಗ ನಷ್ಟದ ವಿಚಾರ ಪ್ರಮುಖವಾಗಲಿಲ್ಲ. ಆ ರೇಲ್ವೆ ಕಂಪನಿ ತನ್ನ ಗ್ರಾಹಕರ ಸೇವೆಗಾಗಿ ತೋರಿಸಿದ ಬದ್ಧತೆ ಸುದ್ದಿಯಾಯಿತು.
ನಮ್ಮ ಲ್ಲಿಯ ಅಧಿಕಾರಿಗಳು “ರಾಜ್ಯದಲ್ಲಿ ಸಾವಿರಾರು ಶಾಲೆಗಳಲ್ಲಿ ಹತ್ತಕ್ಕಿಂತ ಕಮ್ಮಿ ಮಕ್ಕಳಿದ್ದಾರೆ. ಅವರಿಗಾಗಿ ನಾವು ವರ್ಷಕ್ಕೆ 12 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದೇವೆ. ಅದಕ್ಕಿಂತ ಅವನ್ನು ಮುಚ್ಚಿಬಿಡುವುದು ಲೇಸು,’’ ಅನ್ನುವ ಲಾಭ-ನಷ್ಟದ ಮಾತಾಡಿದಾಗ ನನಗೆ ಪಿಚ್ಚೆನ್ನಿಸುತ್ತದೆ. ಸಾರ್ವಜನಿಕ ಸೇವೆ, ಜವಾಬುದಾರಿ ಮುಂತಾದ ಮಾತಾಡಿದರೆ, “ಮುಚ್ಚಿದ ಶಾಲೆಗಳ ಮಕ್ಕಳಿಗಾಗಿ ಈಗ ಆರ್ಟೀಯಿ ಇದೆಯಲ್ಲಾ, ಇನ್ನೇನು ಬೇಕು’’ ಅನ್ನುತ್ತಾರೆ.
ಇವರನ್ನು ನೋಡಿದಾಗ ನನಗೆ ಆ ಜಪಾನಿನ ರೈಲು ನೆನೆಪಾಗುತ್ತದೆ.
ಮೂಲ ಸೌಕರ್ಯ:
ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಗಳ ಕೊರತೆ ಇದೆ ಎನ್ನುವ ಮಾತು ಸರಕಾರಿ ಶಾಲೆಗಳು ಹುಟ್ಟಿದ ದಿನವೇ ಹುಟ್ಟಿದ ಮಾತು. ಈ ಕೊರತೆ ನೀಗಿಸಲು ಕಳೆದ ಅನೇಕ ದಶಕಗಳಲ್ಲಿ ಆಳಿದ ವಿವಿಧ ಪಕ್ಷಗಳ, ವಿವಿಧ ನಾಯಕರ ಸರಕಾರಗಳು ಪ್ರಯತ್ನ ಮಾಡಿವೆ. ಇಂದಿಗೂ ಮಾಡುತ್ತಿವೆ. ಈ ಕೆಲಸ ಮುಂದುವರೆಯಲಿ, ಇನ್ನೂ ಹೆಚ್ಚು ಪ್ರಭಾವಶಾಲಿಯಾಗಲಿ. ಮೂಲ ಸೌಕರ್ಯಗಳು ಯಾವುದೇ ವ್ಯವಸ್ಥೆ ಸರಿಯಾಗಿ ನಡೆಯಲು ಸಹಾಯಕವಾದವು. ಇದು ನಿರ್ವಿವಾದ.
IMG_4306ಆದರೆ ಇಂದಿನ ದಿನ ಗಳಲ್ಲಿ ಸರ್ವೇ ಸಾಮಾನ್ಯ ಎನ್ನಬಹುದಾದ ಸೌಕರ್ಯಗಳು ಕೆಲವೇ ದಶಕಗಳ ಹಿಂದೆ ಕನಸಿಗೂ ನಿಲುಕದವಾಗಿದ್ದವು ಎನ್ನುವುದನ್ನು ನಾವು ಮರೆಯುವುದು ಬೇಡ. ರಾಜ್ಯದ ನೂರಾರು ಶಾಲೆಗಳು ನೂರು ವರ್ಷಕ್ಕೂ ಹಳೆಯವು. ಅವು ಆರಂಭವಾದಾಗ ಶಾಲೆ ಎಂದರೆ `ಶಿಕ್ಷಕ- ವಿದ್ಯಾರ್ಥಿಗಳು’ ಎನ್ನುವುದನ್ನು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಆದರೆ ಅವುಗಳಲ್ಲಿ ಕೆಲವಾದರೂ ಜಗತ್ತೇ ನಿಬ್ಬೆರಗಾಗುವಂತಹ ಯಶಸ್ವೀ ನಾಗರಿಕರನ್ನು, ನಾಯಕರನ್ನೂ, ಬುದ್ಧಿವಂತರನ್ನು ಸೃಷ್ಟಿಸಿದವು ಎನ್ನುವುದನ್ನೂ ಸಹ ನಾವು ಮರೆಯಬಾರದು.
ಇದಕ್ಕೆ ಸಂಬಂಧ ಪಟ್ಟಂತೆ ಇರುವ ಇನ್ನೊಂದು ವಿಷಯ ವೆಂದರೆ ಯಾವುದೇ ಮೂಲ ಸೌಕರ್ಯ ವಿಲ್ಲದ ಖಾಸಗಿ ಶಾಲೆಗಳಿಗೆ ಸರಕಾರ ಪರವಾನಿಗೆ ನೀಡುವುದು. ಅವರು ಈ ಸೌಕರ್ಯಗಳನ್ನು ಒದಗಿಸಿದ್ದಾರೋ ಇಲ್ಲವೋ ಎನ್ನುವುದನ್ನು ಕಾಲಕಾಲಕ್ಕೆ ನೋಡದೇ ಇರುವುದು, ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಕನಿಷ್ಟ ಒಂದು ಕಿಲೋಮಿಟರ್ ಇರಬೇಕು ಎನ್ನುವ ನಿಯಮವನ್ನು ಪದೇ ಪದೇ ಮುರಿಯುವುದು, ರಾಜಕಾರಣ ಇಂತಹ ನಿರ್ಧಾರಗಳನ್ನು ಪ್ರಭಾವಿಸುವುದು, ಇವೆಲ್ಲವೂ ಸಹ ಇಂದಿನ ದುಸ್ಥಿತಿಗೆ ಕಾರಣಗಳು.
ಪಾಲಕರ ಭಾಗೀದಾರಿ:
ಯಾರು ತಮ್ಮ ಮಕ್ಕಳನ್ನು ಪ್ರಜ್ಞಾವಂತರನ್ನಾಗಿ, ಸಜ್ಜನರನ್ನಾಗಿ, ಯಶಸ್ವೀ ನಾಗರಿಕರನ್ನಾಗಿ ರೂಪಿಸುವ ಉದ್ದೇಶದಿಂದ ಶಾಲೆಗೆ ಕಳಿಸುತ್ತಾರೋ, ಅವರ ಜವಾಬ್ದಾರಿ ಮಕ್ಕಳನ್ನು ಶಾಲೆಗೆ ನೂಕಿ ಸುಮ್ಮನಾಗಿ ಬಿಟ್ಟರೆ ಮುಗಿಯುವುದಿಲ್ಲ. ಪಾಲಕರ ಸಹಭಾಗಿತ್ವವಿಲ್ಲದೇ ಶಾಲಾ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯವಿಲ್ಲ. ಮಕ್ಕಳು ಕಲಿಯುವ, ಶಿಕ್ಷಕರು ಕಲಿಸುವ ಪ್ರಕ್ರಿಯೆಯಲ್ಲಿ ಪಾಲಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಮಸ್ಯೆಗಳಿದ್ದರೆ ಮಾತುಕತೆ ಯಿಂದ ಬಗೆ ಹರಿಸಿಕೊಳ್ಳಬೇಕು. ಹಾಗೆಂದು ಪಾಲಕರು ತಮ್ಮ ಪಾಲಿನ ಎಲ್ಲೆಗಳನ್ನು ಅರಿಯಬೇಕು. ಶೈಕ್ಷಣಿಕ ವಿಷಯಗಳನ್ನು ಬಿಟ್ಟು ದಿನ ನಿತ್ಯದ ಆಡಳಿತ ದ ಲ್ಲಿ ಕೈಹಾಕುವ ಪಾಲುದಾರಿಕೆಯಿಂದ ತೊಂದರೆಯೇ ಹೆಚ್ಚು.
ಇಂದಿನ ದಿನಗಳಲ್ಲಿ ಪ್ರಮುಖ ಎನ್ನಿಸಿಕೊಂಡಿರುವ ಇಂಗ್ಲಿಷ್ ಕಲಿಕೆಯ ಸಮಸ್ಯೆಯನ್ನು ಸಹ ಪಾಲಕರು ಪರಿಹರಿಸಬಹುದು. ಒಂದು ಶಾಲೆಯ ಪಾಲಕರೆಲ್ಲ ಸೇರಿ ಒಬ್ಬ ಇಂಗ್ಲಿಷ್ ಬೋಧಕರನ್ನು ಅರೆ ಕಾಲಿಕವಾಗಿ ನೇಮಿಸಿಕೊಂಡರೆ, ಎಲ್ಲ ವರ್ಗಗಳಿಗೂ ಆದೀತು. ನಮ್ಮ ಶಾಲೆಯಲ್ಲಿ ಇಂಗ್ಲಿಷ್ ಕಲಿಸುವುದಿಲ್ಲ ಎನ್ನುವ ಕೊರತೆ ಇಂಗೀತು. ಬೆಂಗಳೂರಿನ ಕೆಲವು ಶಾಲೆಗಳಲ್ಲಿ, ಅಬ್ಯಾಕಸ್, ರಂಗ ತರಬೇತಿ, ಸಂವಹನ ಕಲೆಗಳಿಗೆ ಹಾಗೂ ಇತರ ವಿಷಯಗಳಿಗೆ ಪಾಲಕರೇ ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕಿ ಹುಡುಕಿ ನೇಮಿಸುತ್ತಿದ್ದಾರೆ, ಅಲ್ಲವೇ? ತಮಿಳುನಾಡಿನಲ್ಲಿ ಕೆಲವು ಕಡೆ, ವಿಶೇಷವಾಗಿ ಸೇನಾ ನೆಲೆಗಳಲ್ಲಿ ಇರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ತಮಿಳು ಶಿಕ್ಷಕರು ಇಲ್ಲದೇ ಹೋದರೆ, ಪಾಲಕರು ನೇಮಿಸುತ್ತಾರೆ. ಇದು ಅಲ್ಲಿ ಅನೇಕ ದಶಕಗಳಿಂದ ನಡೆದುಕೊಂಡು ಬಂದ ವ್ಯವಸ್ಥೆ.
ಮೇಲ್ವಿಚಾರಣೆ :
ಇದು ಸ್ವಲ್ಪ ಸೂಕ್ಷ್ಮ ವಿಚಾರ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹುಟ್ಟು ಹಾಕುವಂಥದ್ದೂ ಇರಬಹುದು. ಆದರೆ ಅಲ್ಲಗಳೆಯುವಂಥದಲ್ಲ. ಸರಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವಿನ ಅತ್ಯಂತ ದೊಡ್ಡ ವ್ಯತ್ಯಾಸ ಎಂದರೆ ಅಲ್ಲಿ ಕೆಲಸ ಮಾಡುವವರ ಮೇಲಿನ ಮೇಲ್ವಿಚಾರಣೆಯ ಮಟ್ಟ. ಸರಕಾರಿ ಶಾಲಾ ಶಿಕ್ಷಕರು ಹೆಚ್ಚಿನ ವಿದ್ಯಾರ್ಹತೆ ಹೊಂದಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆಯ್ಕೆಯಾಗಿದ್ದವರು, ಖಾಸಗಿಯವರಿಗೆ ಹೋಲಿಸಿದರೆ ಹೆಚ್ಚಿನ ಸಂಬಳ ಪಡೆಯುವವರೂ ಹೌದು. ಆದರೆ ಅವರ ಕಾರ್ಯಕ್ಷಮತೆ ಖಾಸಗಿ ಶಿಕ್ಷಕರಿಗಿಂತ ಕಡಿಮೆ ಎನ್ನುವ ಮಾತುಗಳನ್ನು ಆಗಾಗ ಕೇಳುತ್ತಿರುತ್ತೇವೆ. ಇದನ್ನು ಸಾಮಾನ್ಯ ಜನರೂ ಹೇಳುತ್ತಾರೆ, ಅಧಿಕಾರಿಗಳು, ಮಂತ್ರಿಗಳೂ ಹೇಳುತ್ತಿರುತ್ತಾರೆ. ಸರಕಾರಿ ಶಿಕ್ಷಕರ ಪ್ರತಿಭೆಯ ಕುರಿತು ಯಾರಿಗೂ ಸಂದೇಹಗಳಿದ್ದಂತೆ ಇಲ್ಲ. ಆದರೆ ಅವರು ತಮ್ಮ ಆಂತರಿಕ ಶಕ್ತಿಗಿಂತ ಕಡಿಮೆ ಕೆಲಸ ಮಾಡುತ್ತಿದ್ದಾರೆ ಎಂದಾದರೆ ಅದಕ್ಕೆ ಅವರ ಅನಾಸಕ್ತಿ ಕಾರಣ, ಪ್ರತಿಭೆಯ ಕೊರತೆ ಅಲ್ಲ. ಇದಕ್ಕೆ ಸರಕಾರಿ ವ್ಯವಸ್ಥೆಯಲ್ಲಿ ಅಪರೂಪ ವಾಗಿರುವ ಒಳ್ಳೆಯ ಕೆಲಸಗಾರರನ್ನು ಹುಡುಕಿ ಬೆನ್ನು ತಟ್ಟುವ ವ್ಯವಸ್ಥೆ ಮುಖ್ಯ ಕಾರಣ ಇರಬಹುದು.
ಇದಕ್ಕೆ ಇನ್ನೊಂದು ಕಾರಣ ಎಂದರೆ ಖಾಸಗಿ ಶಾಲೆಗಳಲ್ಲಿ ಇರುವ ದೈನಂದಿನ ಮೇಲ್ವಿಚಾರಣೆ ಹಾಗೂ ಶಿಕ್ಷಕ, ಸಿಬ್ಬಂದಿಗಳ ವಾರ್ಷಿಕ ಕಾರ್ಯಕ್ಷಮತೆಯ ಅವಲೋಕನ. ಕೆಲಸದ ಸ್ಥಳಗಳಲ್ಲಿ ಮೇಲಿನವರು ಗಟ್ಟಿಯಾಗಿದ್ದಾಗ ಜೋರಾಗಿ ಕೆಲಸ ಮಾಡುವುದು, ಅವರು ತಲೆ ಕೆಡಿಸಿಕೊಳ್ಳದಿದ್ದಾಗ ಕೆಳಗಿನವರು ತಮ್ಮ ಕರ್ತವ್ಯವನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು ಮನುಷ್ಯ ಸಹಜ ಸ್ವಭಾವ.
ವಿಶ್ವಬ್ಯಾಂಕಿನ ಸೂಚನೆಯಂತೆ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು ಶಾಲೆಗಳಲ್ಲಿನ ತ್ರೈಮಾಸಿಕ ಪರಿವೀಕ್ಷಣಾ ವ್ಯವಸ್ಥೆಯನ್ನು 2001 ರಲ್ಲಿ ಕೈಬಿಟ್ಟವು. ಶಿಕ್ಷಕರನ್ನು ವಿಷಯವಾರು ಪರೀಕ್ಷೆಗೆ ಒಳಪಡಿಸುವ ವ್ಯವಸ್ಥೆ ನಿಂತು ಹೋಯಿತು. ಕಲಿಕಯ ಗುಣಮಟ್ಟ ಕುಸಿಯಲು ಇದೂ ಒಂದು ಕಾರಣ.
ತಮ್ಮ ಸೇವೆಯುದ್ದಕ್ಕೂ ನುಡಿದಂತೆ ನಡೆದ ಭಾರತೀಯ ಪೋಲಿಸ್ ಸೇವೆ ಅಧಿಕಾರಿ ಅಜಯ ಕುಮಾರ್ ಸಿಂಗ್ ನನಗೆ ಹೇಳಿದ ಒಂದು ಮರೆಯಲಾರದ ಮಾತಿನೊಂದಿಗೆ ಮುಗಿಸುತ್ತೇನೆ.
ಅವರೊಂದಿಗೆ ಹೀಗೊಮ್ಮೆ ಮಾತಿಗೆ ಕೂತಾಗ ನಾನು, ``ಏನು ಮಾಡುವುದು ಬಿಡಿ ಸಾರ್, ಈ ವ್ಯವಸ್ಥೆ ಯಲ್ಲಿ ಎಲ್ಲರೂ ಕಳ್ಳರು. ಯಾರನ್ನು ತಿದ್ದಲು ಸಾಧ್ಯ ವಿದೆ? ಇಡೀ ವ್ಯವಸ್ಥೆಯೇ ಹಾಳಾಗಿ ಹೋದಾಗ ಸಮಾಜದ ಯಾವುದೋ ಒಂದು ಭಾಗ ಮಾತ್ರ ಪ್ರಾಮಾಣಿಕರಾಗಿ ಇರಬೇಕು ಎನ್ನುವ ಮಾತೇ ತಪ್ಪು’’ ಎನ್ನುವ ವೇದಾಂತದ ಮಾತಾಡಿದೆ.
ajayಅದಕ್ಕೆ ಅವರು “ಅಯ್ಯೋ ಹಾಗನ್ನಬೇಡಿ. ಹಾಗೆ ತುಂಬ ಜನರಲ್ ಆಗಿ ಮಾತಾಡಿದರೆ ಹೇಗೆ,’’ ಎನ್ನುತ್ತಾ ಕಣ್ಣಗಲಿಸಿ ನಕ್ಕರು.
“ಸ್ವಾತಂತ್ರ ಬಂದ ಹೊಸತರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಬಳ ಏನಿದ್ದಿರಬಹುದು? ಕೆಲವು ಆಣೆಗಳು ಮಾತ್ರ. ಅವರಿಗೆ ಬೇರೆ ಯಾವ ಸೌಲಭ್ಯಗಳು ಇದ್ದವು? ಏನೂ ಇಲ್ಲ. ಆದರೆ ಅವರ ವೃತ್ತಿಗೆ ಅವರ ಬದ್ಧತೆ ಎಷ್ಟಿತ್ತು? ಅವರು ಇಡೀ ಸಮಾಜದ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿ ಇಟ್ಟಿದ್ದರು. ಮನೆ ಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಕರೆ ತಂದರು, ಬಡ ಹುಡುಗರಿಗೆ ಪುಸ್ತಕ- ಬಟ್ಟೆ ಕೊಡಿಸಿದರು. ದೂರದ ಊರಿನಲ್ಲಿದ್ದ ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಕಟ್ಟಿಕೊಂಡು ಹೋಗಿ ಪರೀಕ್ಷೆ ಬರೆಸಿದರು. ಇಂದಿಗೂ ನಮ್ಮಂಥ ಅನೇಕರ ಬದುಕಿನಲ್ಲಿ ಅತ್ಯಂತ ಗೌರವಕ್ಕೆ ಅರ್ಹರಾಗಿರುವ ಸ್ಥಾನದಲ್ಲಿ ಇರುವವರು ಶಿಕ್ಷಕರು. ನಿಜವಾದ ಅರ್ಥದಲ್ಲಿ ಅವರು ಆಧುನಿಕ ಭಾರತದ ನಿರ್ಮಾಪಕರು. ಆ ಹೊತ್ತಿನಲ್ಲಿ ನಮ್ಮೆಲ್ಲ ಶಿಕ್ಷಕರು ಅಪ್ರಾಮಾಣಿಕರಾಗಿದ್ದರೆ ಏನಾಗುತ್ತಿತ್ತು ಎಂದು ಯೋಚಿಸಿದ್ದೀರಾ? ಅವರು ತಮ್ಮ ಕರ್ತವ್ಯಕ್ಕೆ ಬೆನ್ನು ತೋರಿಸಿದ್ದರೆ, ದುಡ್ಡಿನ ಆಸೆಗೆ ಬಿದ್ದು ತಮ್ಮಿಂದ ನಿರೀಕ್ಷಿಸಲಾದ ಸೇವೆ ನೀಡದೆ ಇದ್ದಿದ್ದರೆ, ಅಥವಾ ಸೋಮಾರಿಗಳಾಗಿ ಅಲೆದಾಡಿದ್ದರೆ, ಅಥವಾ ರಾಜಕಾರಣಿಗಳ ಹಿಂದೆ ಓಡಾಡಿಕೊಂಡಿದ್ದರೆ, ಅಥವಾ ಬೇರೆ ಯಾವುದೋ ರೀತಿಯಲ್ಲಿ ನಿರ್ಲಕ್ಷ ವಹಿಸಿದ್ದರೆ, ಏನಾಗುತ್ತಿತ್ತು? ಈ ದೇಶದಲ್ಲಿ ಇಂಜಿನಿಯರುಗಳು, ವೈದ್ಯರು, ಶಿಕ್ಷಕರು, ವಿಜ್ಞಾನಿಗಳು, ನ್ಯಾಯಾಧೀಶರು, ಕಲಾಕಾರರು, ಐಏಎಸ್ ಅಧಿಕಾರಿಗಳು, ಪೋಲಿಸರು, ಇವರು ಯಾರೂ ಇರುತ್ತಿರಲಿಲ್ಲ. ಜಾಗತಿಕ ಮಟ್ಟದಲ್ಲಿ ಭಾರತ ಐಟಿ ತಂತ್ರಜ್ಞರ, ವಿಜ್ಞಾನಿಗಳ ದೇಶವಾಗಿ ಹೊರಹೊಮ್ಮುತ್ತಿರಲಿಲ್ಲ. ಯಾವ ಕ್ಷೇತ್ರದಲ್ಲಿಯೂ ನಾವು ಮುಂದುವರೆಯಲು ಆಗುತ್ತಿರಲಿಲ್ಲ ಎಂದು ಡಾ. ಸಿಂಗ್ ವಿವರಿಸಿದರು.
ನನ್ನ ಬದುಕಿನ ಕತ್ತಲೆಯ ದಿನಗಳಲ್ಲಿ ಸದಾ ಬೆಳಕು ನೀಡುವ ಮಾತು ಇದು.
Comments