ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ `ಆದಿಲ್ ಶಾಹಿ ಆಡಳಿತ ಹಾಗೂ ಬಹು ಸಂಸ್ಕೃತಿ’ ವಿಚಾರ ಸಂಕಿರಣ
ಹೀಗೊಂದು ಅರ್ಧ ಭಾಷಣ
ಎಲ್ಲರಿಗೂ ನಮಸ್ಕಾರ
ಕೇಂದ್ರೀಯ ವಿಶ್ವವಿದ್ಯಾಲಯ ದವರು `ಆದಿಲ್ ಶಾಹಿ ಆಡಳಿತ ಹಾಗೂ ಬಹು ಸಂಸ್ಕೃತಿ’ಯ ಬಗ್ಗೆ ವಿಚಾರ ಸಂಕಿರಣ ಆಯೋಜಿಸಿದ್ದಾರೆ. ಯಾವುದು ಈಗ ತುಂಬ ಅಪರೂಪ ವಾಗುತ್ತಿದೆಯೋ ಅದರ ಬಗ್ಗೆ ಚರ್ಚೆ ಮಾಡುವ ಸಾಹಸ ಮಾಡಿದ್ದಕ್ಕಾಗಿ ಹಾಗೂ ಅದರಲ್ಲಿ ಇನ್ನೂ ನಂಬಿಕೆ ಇಟ್ಟ ಕೆಲವು ಜನರನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.
ನಾನು ಇತಿಹಾಸದ ಒಬ್ಬ ವಿದ್ಯಾರ್ಥಿಯಾಗಿ ಅರ್ಧ ಜೀವನ ಕಳೆದಿದ್ದೇನೆ. ಅಂಕಲಿಪಿ ನೋಡಿಕೊಂಡು ಅಕ್ಷರ ಕಲಿಯುವ ನಾವು ನಿನ್ನೆ ``ರಠಈಕ’’ ಎಂದು ತೀಡಿದ್ದನ್ನು ನೋಡಿಕೊಂಡು ಬರೆದರೆ ನಮ್ಮ ಇಂದಿನ ಹಸ್ತಾಕ್ಷರ ಸುಧಾರಿಸೀತು ಎನ್ನುವ ನಂಬಿಕೆ ನನ್ನದು. ಇದನ್ನು ನೋಡಿದ ಡಾ. ಶಿವಗಂಗಾ ರುಮ್ಮಾ ಅವರು ಹಾಗೂ ಇತರ ಆಯೋಜಕರು ನನ್ನಂಥವರನ್ನು ಇಲ್ಲಿಗೆ ಕರೆದಿರಬಹುದು. ಅವರಿಗೆ ಮನತುಂಬಿದ ಧನ್ಯವಾದ.
ಆದರೆ ನಾನು ಇಲ್ಲಿಗೆ ಬಂದಿರುವುದು ನಮ್ಮ ಇತಿಹಾಸ ದ ಅರಿವಿನ ಆಳವನ್ನು ಹೆಚ್ಚಿಸಿದ, ನಮ್ಮ ದೇಶದ ಸಾಕ್ಷಿ ಪ್ರಜ್ಞೆಯಾಗಿ ನಮ್ಮ ನಡುವೆ ಇರುವ ಪ್ರೊ. ಷೇಖ್ ಅಲಿ ಸರ್ ಅವರು, ಯುವಕರನ್ನೂ ನಾಚಿಸುವಷ್ಟು ಚೈತನ್ಯ ಹೊಂದಿರುವ 85 ವರ್ಷದ ಇತಿಹಾಸಕಾರ ಡಾ. ಎಮ್. ಎ. ನಯೀಮ್ ಅವರು, ಹಿಂದೂ -ಬೌದ್ಧ– ಜೈನ್ ಸಂಸ್ಕೃತಿಗಳ ಬಗ್ಗೆ ತಮ್ಮ ಅಪಾರ ಆಸಕ್ತಿ ಹಾಗೂ ಅಧ್ಯಯನದಿಂದ ತಮ್ಮ ಪ್ರವೃತ್ತಿಯನ್ನೇ ವೃತ್ತಿಯಾಗಿ ಮಾಡಿಕೊಂಡ ಅಬ್ದುಲ್ ಅಜೀಜ್ ರವರು, ಉಪ್ಪು ನೀರಿನ ನಡುವಿನ ನಡುಗಡ್ಡೆಗಳಾಗಿ ಹೋಗಿರುವ ಕನ್ನಡ – ಉರ್ದುಗಳ ನಡುವಿನ ಅಪರೂಪದ ಸೇತುವೆಯಂತಿರುವ ಸಯ್ಯದ್ ತನ್ವೀರ್ ಅವರು, ಹಾಗು ಅವರಂತಹ ಇತರರನ್ನು ನೋಡಿ ಮಾತಾಡಿಸುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ.
ನಾನು ಹೈದರಾಬಾದು ಕರ್ನಾಟಕದಲ್ಲಿ ಇಷ್ಟು ದಿನ ಕೆಲಸ ಮಾಡಿದವನು. ಈ ಕಾಲದಲ್ಲಿ ಹೊಟ್ಟೆ ಪಾಡಿಗಾಗಿ ಇಲ್ಲಿನ ಇತಿಹಾಸ ಓದಿಕೊಂಡು ``ಅವರು ಆವಾಗಲೇ ಹಾಗಿದ್ದರು, ನಾವು ಈಗ ಹೇಗೇಗೋ ಇದ್ದೇವೆಲ್ಲ’’ ಎಂದು ಅಚ್ಚರಿ ಗೊಂಡು, ಅದರ ಬಗ್ಗೆ ಅವಕಾಶ ಸಿಕ್ಕಾಗಲೆಲ್ಲ ಸ್ವಲ್ಪ ಸ್ವಲ್ಪ ಬರೆದವನು. ನನಗೆ ಆದಿಲ್ ಶಾಹಿಗಳ ಬಗ್ಗೆ ಕೊಂಚ ಗೊತ್ತು ಎನ್ನುವಷ್ಟೇ ಗೊತ್ತು. ಇತರರಿಗೆ ಹೇಳುವಷ್ಟು ಗೊತ್ತಿಲ್ಲ. ಹೀಗಾಗಿ ನಾನು ಇಂದು ಮಾಡಬಂದಿರುವುದು ಕೇವಲ ಅರ್ಧ ಭಾಷಣ- ಬಹು ಸಂಸ್ಕೃತಿಯ ಬಗೆಗೆ.
ಇಂದಿನ ಬಹು ಚರ್ಚಿತ ವಿಷಯಗಳ ಪೈಕಿ ಬಹು ಸಂಸ್ಕೃತಿ ಎನ್ನುವ ಪದವು ಕೂಡ ಒಂದು. ಇದು ತನ್ನ ಮೂಲ ಅರ್ಥವನ್ನು ಕಳೆದುಕೊಂಡು ಬಳಸುವವರ ಬಾಯಲ್ಲಿ ಏನೇನೋ ಆಗಿ ಹೋಗುತ್ತಿರ ಬಹುದು ಎಂದು ನನಗೆ ಆತಂಕವಿದೆ. ಅದಕ್ಕೆ ತಿಳಿಯದವರು ಎಷ್ಟು ಕಾರಣರೋ, ಅಷ್ಟೇ ತಿಳಿದವರೂ ಕೂಡ ಕಾರಣವಿರಬಹುದು ಅಂತ ನನಗೆ ಒಂದೊಂದು ಸಾರಿ ಅನ್ನಿಸುತ್ತದೆ.
ಬಹುಶ್ರತ ವಿಧ್ವಾಂಸರು ತಾವು ಸಹಜವಾಗಿ ಭಾರಿ ಭಾರಿ ಪದಗಳನ್ನು ಬಳಸುವಂತೆ ಬಹುಸಂಸ್ಕೃತಿ ಎನ್ನುವ ಪದ ಬಳಸಿದಾಗಲೆಲ್ಲ, ಸಾಮಾನ್ಯ ಜನರು ಇದೇನೋ ದೊಡ್ಡ ವಿಷಯ ಇರಬಹುದು, ನಮ್ಮಂಥವರ ದಿನ ನಿತ್ಯದ ಜಗತ್ತಿಗೆ ಸಂಬಂಧ ಪಟ್ಟದ್ದು ಇರಲಿಕ್ಕಿಲ್ಲವೆಂದು ಗಾಬರಿಯಿಂದ ದೂರ ಸರಿಯುತ್ತಾ ರೋ ಏನೋ. ನಮ್ಮ ಸಮಾಜ ಬಹು ಸಂಸ್ಕೃತಿಯಿಂದ ಕೂಡಿರಬೇಕು ಎಂದು ದೊಡ್ಡವರೆಲ್ಲಾ ದೇಶದ ಯುವ ಜನತೆಗೆ ಕರೆ ಕೊಟ್ಟಾಗ ಇದೇನೋ ಅಸಾಧ್ಯವಾದದ್ದನ್ನು ಇವರು ಹೇಳುತ್ತಿರಬೇಕು ಎಂದು ಈ ಹುಡುಗರಿಗೆ ಅನ್ನಿಸಿ, ಮುಂದೆ ಕೇಳಿಸಿಕೊಳ್ಳುವುದನ್ನೇ ನಿಲ್ಲಿಸಿರಬೇಕು ಅಂತ ನನಗೆ ಅನೇಕ ಬಾರಿ ಅನ್ನಸಿದೆ. ಹಿಂದೊಮ್ಮೆ ದೊಡ್ಡ ವಿಧ್ವಾಂಸರೊಬ್ಬರು ``ಸಮಕಾಲೀನ ಜಾಗತಿಕ ಸಂದರ್ಭದಲ್ಲಿ’’ ಎಂದು ತಮ್ಮ ಮಾತನ್ನು ಆರಂಭಿಸಿದಾಗ ಸಮಕಾಲೀನ ಜಾಗತಿಕ ಸಂದರ್ಭವೇ ಅಲ್ಲಿಂದ ಕಾಲು ಕಿತ್ತಿತಂತೆ. ಹಾಗೆ.
`ಬಹಳ ತಿಳಿದುಕೊಂಡವನು ಬುದ್ಧಿವಂತನಲ್ಲ. ತನಗೆ ಗೊತ್ತಿರುವುದನ್ನು ಇತರರಿಗೆ ತಿಳಿಸಿ ಹೇಳುವವನು ನಿಜವಾದ ಬುದ್ಧಿವಂತ’ ಎಂಬ ಸುಭಾಷಿತ ವೊಂದಿದೆ. ನಮ್ಮಲ್ಲಿ ಅನೇಕ ಪಂಡಿತರು ಈ ಜವಾಬುದಾರಿಯನ್ನು ಅರಿಯುತ್ತಿಲ್ಲ, ಅದಕ್ಕೆ ತಕ್ಕಂತೆ ನಡೆಯುತ್ತಿಲ್ಲ ಎಂದು ನನಗೆ ಅನ್ನಿಸುತ್ತದೆ.
ಬಹು ಸಂಸ್ಕೃತಿ ಎಂದರೆ ಬೇರೆ ಏನೂ ಅಲ್ಲ. ``ನಾವು-ನೀವು ಇಷ್ಟು ದಿನ ಸರಳವಾಗಿ, ಸಹಜವಾಗಿ, ಒಬ್ಬರನ್ನೊಬ್ಬರು ಸಹಿಸಿಕೊಂಡು, ಒಪ್ಪಿಕೊಂಡು, ಒಬ್ಬರಿಗೊಬ್ಬರು ಕೇಡು ಬಗೆಯದೆ ಜೀವಿಸಿದ್ದೇವಲ್ಲ, ಅದೇ’’ ಅಂತ ಯಾರಾದರೂ ಹೇಳಿದರೆ ಆ ಪದದ ಪರದೇಸಿತನ ಕಡಿಮೆಯಾಗುತ್ತದೆ.
ಆದರೆ ‘ಜಗತ್ತಿನಲ್ಲಿ ಅತ್ಯಂತ ಸಂಕೀರ್ಣ ವಾದ ಕೆಲಸಗಳ ಪೈಕಿ ಒಂದೆಂದರೆ ಸರಳವಾಗಿ ಜೀವಿಸುವುದು’ ಎನ್ನುವ ಮಾತಿದೆ. ಅದಕ್ಕೆ – ‘ಇತರರಿಗೆ ಅರ್ಥ ವಾಗುವಂತೆ ಮಾತಾಡುವುದು’ - ಎನ್ನುವ ಇನ್ನೊಂದು ಸಾಲನ್ನೂ ಸೇರಿಸಬಹುದು.
ನಾವು ಮಾತಾಡುವಾಗ, ಬರೆಯುವಾಗ ಅಷ್ಟೊಂದು ಕ್ಲಿಷ್ಟವಾಗಿ, ಕೆಲವೇ ಕೆಲವು ಜನರಿಗೆ ತಿಳಿಯುವಂತೆಯೋ, ಅಥವಾ ಓದಿದವರಿಗೆ, ಕೇಳಿದವರಿಗೆ ಬೇರೆ ಬೇರೆ ಅರ್ಥ ಬರುವಂತೆಯೋ ಏಕೆ ಮಾತಾಡುತ್ತೇವೆ? ಏಕೆ ಬರೆಯುತ್ತೇವೆ ಎಂಬುದು ನನಗೆ ಅರ್ಥವಾಗಲಾರದ ವಿಚಾರ. ಇದರ ಬಗ್ಗೆಯೇ ಕೇಂದ್ರೀಯ ವಿಶ್ವವಿದ್ಯಾಲಯ ಬೇರೆಯೇ ಒಂದು ವಿಚಾರ ಸಂಕಿರಣ ಇಟ್ಟುಕೊಳ್ಳಬಹುದೇನೋ.
ಸರಳ ಭಾಷೆಯ ಬಗ್ಗೆ ಇಂಗ್ಲಂಡಿನಲ್ಲಿ ಒಂದು ನೂರು ವರ್ಷದ ಹಿಂದೆ ಒಂದು ಜನಾಂದೋಲನವೇ ಆಗಿ ಹೋಯಿತು. ಅದು ಎಷ್ಟು ತೀವೃವಾಗಿ ಪರಿಣಾಮಕಾರಿಯಾಗಿ ಬೆಳೆಯಿತು ಎಂದರೆ, ಈಗ ಲಂಡನ್ನಿನಲ್ಲಿ ಸರಕಾರದ ದಾಖಲೆಗಳೆಲ್ಲವೂ ಜನರಿಗೆ ಅರ್ಥವಾಗುವಂತೆ ಇರಬೇಕು ಎನ್ನುವ ಕಾನೂನೇ ಇದೆ. `ಸರಳ ಭಾಷಾ ಆಯೋಗ’ ಅಂತ ಒಂದು ಸಾರ್ವಜನಿಕ ಸಂಸ್ಥೆಯೇ ಇದೆ. ಸರಕಾರದ ಪ್ರತಿ ದಾಖಲೆ, ಪತ್ರ, ಕಾಯಿದೆ, ಕಾನೂನು, ನಡವಳಿಕೆ, ಎಲ್ಲವೂ ಸರಳ ಭಾಷೆಯಲ್ಲಿ ಇವೆಯೋ ಇಲ್ಲವೋ ಎಂದು ಈ ಆಯೋಗ ಆಭ್ಯಾಸ ಮಾಡಿ ಒಂದು ಪ್ರಮಾಣ ಪತ್ರ ನೀಡುತ್ತದೆ. ಅವುಗಳನ್ನು ಸರಳಗೊಳಿಸಲು ಸರಕಾರಕ್ಕೆ ನಿರ್ದೇಶನ ನೀಡುತ್ತದೆ. ನಮ್ಮ ದೇಶಕ್ಕೆ, ನಮ್ಮ ಕರುನಾಡಿಗೆ ಇಂತಹದೊಂದು ಆಂದೋಳನದ, ಕಾನೂನಿನ, ಆಯೋಗದ ಅವಶ್ಯಕತೆ ಇದೆ ಎನ್ನುವ ವಿಚಾರ ನಮಗೆಲ್ಲರಿಗೂ ಬರಲಿ. ‘ಆನೋ ಭದ್ರಾ ಕೃತವೋ ಯಾಂತು ವಿಶ್ವತಃ’ ಎನ್ನುವುದರ ಆಶಯದಂತೆ.
ಹಾಗಾದರೆ ಬಹು ಸಂಸ್ಕೃತಿ ಎನ್ನುವುದು ಏನು? – `ಅವರವರ ಭಾವಕ್ಕೆ, ಅವರವರ ಭಕುತಿಗೆ’ ಎನ್ನುವ ದಾಸವಾಣಿಯನ್ನು, `ಲೋಕೋ ಭಿನ್ನ ರುಚಿಃ’, ಎನ್ನುವ ಮಾತನ್ನು ನೆನೆದಾಗ ನಮಗೆ ಅದರ ಅರ್ಥ ಸ್ವಲ್ಪವಾದರೂ ತಿಳಿದೀತು.
ಈಗ ಇಂತಹವೇ ಕೆಲವು ಸಂಸ್ಕೃತ ಸುಭಾಷಿತ ಗಳನ್ನು ನೋಡೊಣ.
``ಸರ್ವೇ ಭವಂತು ಸುಖಿನಹ , ಸರ್ವೇ ಸಂತು ನಿರಾಮಯಹ, ಸರ್ವೇ ಭದ್ರಾನಿ ಪಶ್ಯಂತು, ಮಾಕಶ್ಚಿತ್ ತಸ್ಯ ಭಾದ್ ಬವೇತ್’’ – ಇದು ಸರ್ವೇ ಡಿಪಾರ್ಟಮೆಂಟಿನವರಿಗೆ ಮಾತ್ರ ಒಳ್ಳೆಯದಾಗಲಿ ಎಂಬ ಅರ್ಥ ಬರುವ ಮಾತಲ್ಲ. ಬ್ರಹದಾರಣ್ಯಕ ಉಪನಿಷತ್ತಿನ ಉದಾತ್ತ ಅರ್ಥ ಹೊಂದಿದ ಶ್ಲೋಕ ವಿದು. `ಎಲ್ಲರೂ ಸುಖವಾಗಿರಲಿ, ನಿರೋಗಿಯಾಗಿರಲಿ, ಎಲ್ಲರಿಗೂ ಪವಿತ್ರವಾದದ್ದು ಕಾಣಲಿ, ಯಾರಿಗೂ ತೊಂದರೆ ಉಂಟಾಗದಿರಲಿ’ ಎನ್ನುವುದು ಇದರ ಅರ್ಥ. ನನ್ನ ಪ್ರಕಾರ ನೋಡಲು ಅತಿ ಸರಳವಾಗಿ ಕಾಣುವ, ಆದರೆ ಮನುಕುಲಕ್ಕೆ ಸಾವಿರಾರು ವರ್ಷಗಳ ಕಾಲ ಹಾದಿ ತೋರಿಸುವಷ್ಟು ಶಕ್ತಿ ಇರುವ ಮಾತಿದು.
``ದೃಷ್ಟಿ ಜ್ಞಾನಮಯಿ ಕೃತ್ವಾ, ಪಶ್ಚೇದ್ ಬ್ರಹ್ಮ ಮಯಂ ಜಗತ್’’. – ತೇಜೋಬಿಂದು ಉಪನಿಷತ್ ನಿಂದ ಹೆಕ್ಕಿದ ಈ ಸಾಲಿನ ಅರ್ಥ ಎಂದರೆ– `ನಮ್ಮ ತಿಳಿವಿನ ಕಣ್ಣು ತೆರೆದಾಗಲೆಲ್ಲ ನಮಗೆ ಕಾಣವುದು ಏನೆಂದರೆ ಈ ಜಗತ್ತು ಎಲ್ಲವೂ ಬ್ರಹ್ಮ ಮಯವಾದದ್ದು’.
``ಸರ್ವಂ ಖಲ್ವಿದಂ ಬ್ರಹ್ಮ’’ – `ಏನಿದೆಯೋ ಅದೆಲ್ಲವೂ ಬ್ರಹ್ಮ’. ನಾವು ಏನನ್ನು ನೋಡುತ್ತೇವೆಯೋ , ಕೇಳುತ್ತೇವೆಯೋ, ಅನುಭವಿಸುತ್ತೇವೆಯೋ, ಅದೆಲ್ಲವೂ ಬ್ರಹ್ಮ ಎನ್ನುವುದು ಛಾಂದೋಗ್ಯ ಉಪನಿಷತ್ ನ ಒಂದು ಸಾಲು.
``ವಿಶ್ವಂ ನಾರಾಯಣಂ ಹರಿಃ’’ – `ವಿಶ್ವವೆಲ್ಲ ಹರಿ ನಾರಾಯಣ’ ಇದ್ದಂತೆ ಎನ್ನುವುದು ನಾರಾಯಣ ಸೂಕ್ತದ ಮಾತು.
ಕಠೋಪನಿಷತ್ ನಲ್ಲಿ ``ನೇಹ ನಾನಾಸ್ತಿ ಕಿಂಚಿತ್’’ ಎನ್ನುವ ದೊಡ್ಡ ಮಾತು ಬರುತ್ತದೆ. `ಅದು ಬೇರೆ ಇದು ಬೇರೆ’ ಎನ್ನುವ ಬೇಧ ಅನ್ನೋದೇ ಇಲ್ಲ. `ಎಲ್ಲವೂ ಒಂದೇ’ ಎಂದು ಅದನ್ನು ಬಗೆಯಬಹುದು.
``ತ್ವಂ ಸ್ತ್ರೀ ತ್ವಂ ಪುಮಾನ ಅಸ್ತಿ , ತ್ವಂ ಕುಮಾರ, ಉತ್ವಾ ಕುಮಾರಿ ಅಸ್ತಿ, ತ್ವಂ ಜೀರ್ಣೋಸ್ತಿ,’’ - `ನೀನೇ ಸ್ತ್ರೀ, ನೀನೇ ಪುರುಷ , ನೀನೇ ಕುಮಾರ, ಕುಮಾರಿ, ವೃದ್ಧ, ಯುವಕ ಎಲ್ಲವೂ ಹೌದು’ ಎನ್ನುವುದು ಅಥರ್ವ ವೇದದ ಮಾತು.
``ಆತ್ಮಾ ತ್ವಂ ಗಿರಿಜಾ ಮತಿ ಸಹಚರಾ ಪ್ರಾಣಾ ಶರೀರಂ ಗೃಹಂ ಪೂಜಾತೇ ವಿಷಯೋಪಭೋಗ ರಚನಾ ನಿದ್ರಾ ಸಮಾಧಿ ಸ್ಥಿತಿಃ. ಸಂಚಾರ ಪದಯೋಹೋ, ಪ್ರದಕ್ಷಿಣ ವಿಧಿ ಸ್ತೋತ್ರಾಣಿ ಸರ್ವಾಗಿರೋಃ ಯದ್ಯತ್ ಕರ್ಮ ಕರೋಮಿ ತತ್ಥ ದಖಿಲಂ ಶಂಭೋ ತವಾರಾಧನಂ’’
– ಈ ಶಿವ ಸ್ತೋತ್ರ ರಾಷ್ಟ್ರಕವಿ ಕುವೆಂಪು ಅವರನ್ನು ಬಹಳ ವಾಗಿ ಆಕರ್ಷಿಸಿದ್ದು. – ಇದು ಶಿವನ ಶ್ಲೋಕವೂ ಹೌದು, ಸಮಾನತೆಯ ಸಂದೇಶವೂ ಹೌದು, ನಶ್ವರತೆಯ ಮಾತೂ ಹೌದು, ಆತ್ಮಜ್ಞಾನದ ತುಣುಕೂ ಹೌದು.
- ಹೊಸ ಯುಗದ ಹಿಂದೂ ಧರ್ಮದ ಪ್ರತಿಪಾದಕರು ಹೆಜ್ಜೆ ಹೆಜ್ಜೆಗೆ ಉದಾಹರಿಸುವ ಗ್ರಂಥ ಭಗವದ್ ಗೀತೆ. ಅದರಲ್ಲಿಯೂ ಇಂತಹುದೇ ಆಶಯದ ಒಂದು ಮಾತು ಸಿಗುತ್ತದೆ. -
`ಬ್ರಹ್ಮಾರ್ಪಣಂ ಬ್ರಹಂ ಹವಿಃ ಬ್ರಹ್ಮಾಗ್ನೋ ಬ್ರಹ್ಮಣಾಹುತಃ. ಬ್ರಹ್ಮೈವ ತೇನ ಗಂತವ್ಯ , ಬ್ರಹ್ಮ ಕರ್ಮ ಸಮಾಧಿನಹ’. - ``ಅರ್ಪಣ ಮಾಡುವವನು, ಆಗುವುದು, ತೆಗೆದುಕೊಳ್ಳುವವನು, ಅಗ್ನಿ, ಅದರಿಂದ ಸಿಗಲಿರುವದು, ಹಾಗೂ ಅದರ ದಾರಿ ಎಲ್ಲವೂ ಬ್ರಹ್ಮ ವೇ’’.
ಇಷ್ಟು ದೊಡ್ಡ ದರ್ಶನದ ಮಾತುಗಳನ್ನು ಹೇಳಿಕೊಟ್ಟ ನಮ್ಮ ಧರ್ಮ, ಅಣ್ಣ – ತಮ್ಮಂದಿರ ನಡುವೆ ಒಡಕು ಹಚ್ಚಲು ಹೇಗೆ ಸಾಧ್ಯ? ಇಡಿ ಜಗತ್ತಿನಲ್ಲಿ ಇರುವ ಎಲ್ಲವೂ ಬ್ರಹ್ಮ, ವಿಷ್ಣು, ಶಿವ ಆದರೆ, ಅಸಮಾನತೆ ಹೇಗೆ ಇರಲು ಸಾಧ್ಯ? ಜಾತಿ, ಧರ್ಮ, ಲಿಂಗ, ಭಾಷೆ, ಬಣ್ಣ, ಪ್ರದೇಶ, ಊಟದ ಪದ್ಧತಿ, ಮುಂತಾದ ಯಾವುದೇ ರೀತಿಯ ಬೇಧ ಇರಬಹುದು, ಅಂತಹುದರ ನಡುವೆ ಮೇಲು – ಕೀಳು ಎಂಬ ಮಾತು ಇರಲಿಕ್ಕೆ ಹೇಗೆ ಸಾಧ್ಯ?
ಇದೇ ಭಗವದ್ ಗೀತೆ ಯಲ್ಲಿಯೇ ಇನ್ನೊಂದು ಮಾತು ಇದೆ. ಅದು ಮತಾಂಧತೆ ಯ ಮಬ್ಬಿನಿಂದ ನಮ್ಮನ್ನು ಬಡಿದೆಬ್ಬಿಸುವ ಮಾತು. ``ವಿದ್ಯಾ ವಿನಯ ಸಂಪನ್ನೇ ಬ್ರಹ್ಮಣೇ ಗವಿ ಹಸ್ತಿನಿ. ಶುನಿಚೈವ ಸ್ವಪಕೇಚ ಪಂಡಿತಾ ಸಮದರ್ಶಿನಃ’’ – ವಿದ್ಯೆ- ವಿನಯ ಉಳ್ಳವರು ಆಕಳು, ಆನೆ, ನಾಯಿ ಹಾಗೂ ನಾಯಿ ತಿನ್ನುವವರನ್ನು ಒಂದೇ ದೃಷ್ಟಿಯಿಂದ ನೋಡುತ್ತಾರೆ. ಎನ್ನುವುದು ಇಲ್ಲಿನ ಆಶಯ. ನಾಯಿ ತಿನ್ನುವವರನ್ನೇ ಸಮಾನವಾಗಿ ನೋಡುವವರು ದನ ತಿನ್ನುವವರನ್ನು ಅಸಮಾನರನ್ನಾಗಿ ನೋಡುವುದು ಹೇಗೆ ಸಾಧ್ಯ? ಈ ಸಂದೇಹ ನನ್ನನ್ನು ಯಾವಾಗಲು ಕಾಡುತ್ತಿರುತ್ತದೆ.
ಇಷ್ಟೆಲ್ಲಾ ಸಮೃದ್ಧ ಪರಂಪರೆ ಹೊಂದಿದ ನಾವು ಬಹು ಸಂಸ್ಕೃತಿಯಿಂದ ದೂರ ಓಡುತ್ತಿರುವುದೇಕೆ? `` ಇದೆಲ್ಲಾ ನಮಗೆ ಗೊತ್ತೇ ಇಲ್ಲರೀ, ನಮಗಾರಿಗು ಹೇಳಿ ಕೊಡಲೇ ಇಲ್ಲ’’ ಅಂತೆಲ್ಲಾ ನಾವು ನೆವ ಹೇಳಲು ಸಾಧ್ಯವೇ ಇಲ್ಲವಲ್ಲವೇ?. ``ಹೋಗ್ರಿರಿ, ಮಲ್ಟಿ ಕಲ್ಚರಾಲಿಸಂ ಎನ್ನುವುದೆಲ್ಲಾ ಪಾಶ್ಚಿಮಾತ್ಯ ಕಲ್ಪನೆ. ಇಂಥದೆಲ್ಲಾ ನಮಗೆ ಹೇಳಕ್ ಬರಬೇಡಿ’’ ಅಂತನೂ ನಾವು ಹೇಳಲಾಗದು. ನಮ್ಮಲ್ಲೆ ಎಲ್ಲಾ ಇದೆ ! ನಾವು ಹೊರಗೆ ನೋಡುವುದು ಬೇಕಾಗೇ ಇಲ್ಲ. ಹೀಗೆಲ್ಲಾ ಇದ್ದಾಗ ನಮಗೆ ಬೇಕಾಗಿರುವುದು ಏನು? ಕೇವಲ ಆತ್ಮ ನಿರೀಕ್ಷಣೆ ಹಾಗೂ ಆತ್ಮ ವಿಮರ್ಶೆ, ಅಲ್ಲವೇ?
ಇಂತಹುದೆಲ್ಲ ಮಾತನಾಡಲು ಆರಂಭಿಸಿದ ತಕ್ಷಣ ಇದಕ್ಕೆ ಪ್ರತಿಕ್ರಿಯೆಯಾಗಿ ಒಂದು ದೊಡ್ಡ ದನಿ ಕೇಳಿ ಬರುತ್ತದೆ. ಅದೇನೆಂದರೆ- ಬಹು ಸಂಸ್ಕೃತಿ ಉಳಿಸುವುದು ಕೇವಲ ಬಹು ಸಂಖ್ಯಾತರ ಕೆಲಸವೇ? ಅಲ್ಪ ಸಂಖ್ಯಾತರ ಕೆಲಸ ವಲ್ಲವೇ? ಎನ್ನುವುದು. ಅಲ್ಪ ಸಂಖ್ಯಾತರು ಎನ್ನುವ ಪದದ ಅರ್ಥ ದೇಶ ಹಾಗೂ ಕಾಲಕ್ಕೆ ತಕ್ಕಂತೆ ಬದಲಾಗಬಹುದು ಎನ್ನುವ ಅರಿವಿಟ್ಟುಕೊಂಡೇ ಒಂದು ಮಾತನ್ನುನಾವು ನಮ್ಮ ನಮ್ಮಲ್ಲಿ ಆಡಿಕೊಳ್ಳಬಹುದು. – ಅದೇನೆಂದರೆ ಭಾಷೆ, ಧರ್ಮ, ಕೋಮು, ಜಾತಿ, ಲಿಂಗ, ಇತ್ಯಾದಿ ಯಾವುದೇ ರೀತಿಯ ಗುಂಪಿನ ಅಲ್ಪಸಂಖ್ಯಾತರಿರಲಿ , ಅವರಿಗೆ ಒಂದು ದೊಡ್ಡ ಜವಾಬ್ದಾರಿ ಇದೆ. ಅದರಿಂದ ಯಾರೂ ತಪ್ಪಿಸಿಕೊಳ್ಳಲಾರರು. ಯಾವುದೇ ಅಲ್ಪಸಂಖ್ಯಾತರ ಗುಂಪಿರಲಿ, ಎಷ್ಟೇ ದುರ್ಬಲರಿರಲಿ, ಅಪಾಯ ಅಥವಾ ತೊಂದರೆಗೆ ಒಳಗಾದವರಿರಲಿ, ಅವರಿಗೆ ನಮ್ಮ ಸಮಾಜದ ಬಹು ಸಂಸ್ಕೃತಿಯನ್ನು ಕಾಯ್ದುಕೊಂಡು ಹೋಗುವ ಹಾದಿಯಲ್ಲಿ ಮಹತ್ತರವಾದ ಜವಾಬುದಾರಿ ಇದೆ. ಇದನ್ನು ಅವರು ಅರಿಯಲಾರದೇ ಇರಲಾರರು ಎಂದು ನಾನು ನಂಬುತ್ತೇನೆ.
ಇದನ್ನು ನಾನು ಸೂಚ್ಯವಾಗಿ ಹೀಗೆ ಹೇಳಬಯಸುತ್ತೇನೆ. ಮೊದಲನೇಯದಾಗಿ ಬೇಕಾದದ್ದು ಇಂತಹ ವಿವಿಧ ಗುಂಪುಗಳಲ್ಲಿ ಏಕೋಭಾವ. ಇಂದಿಗೂ ವಿವಿಧ ರೀತಿಯ ಅಲ್ಪಸಂಖ್ಯಾತರಲ್ಲಿ ಒಗ್ಗಟ್ಟಿಲ್ಲ. ಇದು ನಮ್ಮ ಸಮಾಜದ ಬಗ್ಗೆ ನಮ್ಮೆಲ್ಲರಿಗೂ ಗೊತ್ತಿದ್ದೂ ಅದರ ಬಗ್ಗೆ ಮಾತನಾಡದೇ, ಏನೂ ಮಾಡದೇ ಸುಮ್ಮನಿರುವ ಅನೇಕ ವಿಷಯಗಳಲ್ಲಿ ಒಂದಿರಬಹುದೇನೋ. ಒಗ್ಗಟ್ಟು ಹಾಗಿರಲಿ, ಅನುಕಂಪ, ಸಹಾನುಭೂತಿ ಹಾಗೂ ಏಕೋಭಾವಗಳಾದರೂ ಬೇಡವೇ? ಇವು ಇಲ್ಲವೆಂದಾದಲ್ಲಿ ಇವುಗಳನ್ನು ಹುಟ್ಟಿಸುವ ಕೆಲಸ ಆರಂಭವಾಗಬೇಕಲ್ಲವೇ? ಒಂದು ರೀತಿಯ ಅಲ್ಪ ಸಂಖ್ಯಾತರು ಅಳುತ್ತಿರುವಾಗ ಇನ್ನೊಂದು ರೀತಿಯ ಅಲ್ಪ ಸಂಖ್ಯಾತರು ನಗಬಾರದಲ್ಲವೇ? ಇದನ್ನು ಮಾಡಬೇಕಾದವರು ಯಾರು?
ಅಲ್ಪ ಸಂಖ್ಯಾತರ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಇತರ ಕ್ಷೇತ್ರದ ನಾಯಕರು ಇಂಥ ಮಹತ್ತರ ಜವಾಬುದಾರಿ ಹೊರಬೇಕಾದವರು ಅಲ್ಲವೇ?
ಇದು ಕೇವಲ ಘೋಷಣೆ, ಭಾಷಣ, ಮೊಂಬತ್ತಿ ಬೆಳಕಿನ ಮೆರವಣಿಗೆಯ ಫಲಕದ ಮೇಲಿನ ಬರವಣಿಗೆ ಆಗಬಾರದು. ಇದು ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಳ್ಳಲೇ ಬೇಕಾದ ನೀತಿಯೂ ಆಗಬೇಕು. ಇನ್ನೊಮ್ಮೆ ಹೇಳುತ್ತೇನೆ, ಇದು ಎಲ್ಲ ರೀತಿಯ ಅಲ್ಪ ಸಂಖ್ಯಾತರಿಗೂ ಲಾಗೂ ಆಗುತ್ತದೆ.
ಎರಡನೇಯದು ಸಹಬಾಳ್ವೆ. ಸಮಾಜವೆಂಬುದೊಂದು ಕುಟುಂಬ ಎನ್ನಬಹುದಾದರೆ ಇಲ್ಲಿ ಜೊತೆಗೂಡಿ ಬಾಳಬೇಕಾದವರು ದೊಡ್ಡ ಮನಸ್ಸು ಮಾಡಿ ಒಬ್ಬರನ್ನೊಬ್ಬರು ಒಪ್ಪಬೇಕು. ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು. ಪ್ರತಿಷ್ಠೆ ಎನ್ನುವುದು ಹೋಗಿ, ಪ್ರೀತಿ, ಸಹಚರ್ಯ ತಲೆದೋರಬೇಕು. ಒಬ್ಬರ ಜೀವನ ಶೈಲಿಯನ್ನು ಇನ್ನೊಬ್ಬರು ಅನುಕರಿಸುವುದು ದೂರವಿರಲಿ, ಅದನ್ನು ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ಕಲಬುರ್ಗಿಯ ಬಂದೇ ನವಾಜರ ಮಾತೊಂದು ಸಹಬಾಳ್ವೆಯ ಬಗ್ಗೆ ನಮ್ಮನ್ನು ಚಿಂತನೆಯನ್ನು ಸ್ಪಷ್ಟಪಡಿಸಬಹುದೇನೋ - ``ಪಾನಿ ಮೆ ನಮಕ್ ಡಾಲ್ ಔರ್ ದೇಖ್ ಉಸೆ. ಮಾನಿ ಮೆ ನಮಕ್ ಘುಲ್ ಜಾಯೇಗಾ ತೊ ನಮಕ್ ಕಹೆ ಕಿಸೆ?’’ – ನೀರಿನಲ್ಲಿ ಉಪ್ಪು ಕರಗಿದ ನಂತರ ಉಪ್ಪಂತ ಕರೆಯುವುದು ಯಾವುದನ್ನು?
ಇನ್ನು `ಸೌಹಾರ್ದ’ ಎನ್ನುವುದು ಎರಡೂ ಕಡೆಗಳಲ್ಲಿರುವರ ಕೆಲಸ. ಇದಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಕತೆ ಹೇಳುತ್ತೇನೆ. ಬೀದರ್ ಜಿಲ್ಲೆಯ ಶ್ರೀ ಮಾಣಿಕ ಪ್ರಭುಗಳ ಪವಿತ್ರ ಸಂಸ್ಥಾನದಲ್ಲಿ ದತ್ತ ಜಯಂತಿ ಆಚರಿಸಿದಷ್ಟೇ ಸಂತಸದಿಂದ ಸೂಫಿ ಸಂತ ಮೆಹಬೂಬ ಸುಬಾನಿ ಅವರ 11 ನೇ ದಿನ (ಗ್ಯಾರಾಹವಿ) ಆಚರಿಸುತ್ತಾರೆ. ಅಷ್ಟೂರಿನ ಅಹಮದ್ ಷಾ ವಲಿಯ ಹುಟ್ಟಿದ ದಿನವನ್ನು ಅಲ್ಲಮ ಪ್ರಭು ಜಯಂತಿಯೆಂದು ಆಚರಿಸಲಾಗುತ್ತದೆ. ಬೀದರ್ ಜಿಲ್ಲೆಯಲ್ಲಿ ಮೌಲಾಲಿಯ ಗುಡಿ ಇದೆ, ಮೃತ್ಯುಂಜಯ ಸ್ವಾಮಿಯ ದರ್ಗಾ ಇದೆ. ಇವೆಲ್ಲವೂ ನನಗೆ ಸೌಹಾರ್ದದ ಸಂಕೇತವಾಗಿ ಕಂಡಿವೆ. ಇವುಗಳ ಬಗ್ಗೆ ನಾನು ಬರೆದಿದ್ದೇನೆ, ಮಾತಾಡಿದ್ದೇನೆ.
ಇವುಗಳ ಬಗ್ಗೆ ರಾಷ್ಟ್ರ ಮಟ್ಟದ ಟಿ. ವಿ ವಾಹಿನಿಯೊಂದರಲ್ಲಿ ಸುದ್ದಿ ಮಾಡಬಹುದು ಎಂದು ನಾನು ದೆಹಲಿಯಲ್ಲಿ ಹಿರಿಯ ಪತ್ರಕರ್ತರಾಗಿರುವ ನನ್ನ ಸ್ನೇಹಿತರೊಬ್ಬರಿಗೆ ಸೂಚಿಸಿದೆ. ಅವರು ``ಅದು ಕೇವಲ ಜಾನಪದ ಇಸ್ಲಾಂ ಇರಬಹುದು, ನೈಜ ಇಸ್ಲಾಂ ಅಲ್ಲ. ಇಂತಹ ಆಚರಣೆ ಗಳಲ್ಲಿ ಪಾಲುಗೊಳ್ಳುವವರು ನಿಜ ಮುಸ್ಲೀಮರು ಆಗಿರಲು ಸಾಧ್ಯವಿಲ್ಲ’’ ಎಂದು ಬಿಟ್ಟರು. ಇಸ್ಲಾಂ ಧರ್ಮಕ್ಕೆ ಸೇರಿರುವ ಅವರು ಈ ಮಾತು ಹೇಳಿದ್ದು ನನಗೆ ತುಂಬ ನಿರಾಸೆ ಮೂಡಿಸಿತು.
ಆಗ ನನಗೆ ನೆನಪಾಗಿದ್ದು `ಸಾಕ್ಷರಃ ವಿಪರೀತೊ ರಾಕ್ಷಸಃ’ ಎನ್ನುವ ಮಾತು. `ಓದಿದವರು ಉಲ್ಟಾ ವಿಚಾರ ಮಾಡಿದರೆ ಅಮಾನುಷರಾಗಿ ವರ್ತಿಸಬಲ್ಲರು’ ಎಂದು ಅದರ ಅರ್ಥ. ನಾನು ಅದನ್ನು `ಹೆಚ್ಚು ಓದಿದವರು ರಾಕ್ಷಸರು’ ಎಂದು ತಮಾಷೆಗೆ ಹೇಳುತ್ತಾ ಇರುತ್ತೇನೆ. ಹೀಗಾದರೆ ಸೌಹಾರ್ದದ ತಾಣಗಳಾದ ದರ್ಗಾ- ಸೂಫಿ ತಾಣಗಳ ವಾತಾವರಣಕ್ಕೆ ಧಕ್ಕೆ ಬರುತ್ತಿರುವುದು ಯಾರಿಂದ?
ಬಲಪಂಥೀಯ ಶಕ್ತಿ ಗಳಿಂದ ಅಲ್ಪ ಸಂಖ್ಯಾತರ ಸಂಸ್ಕೃತಿಯ ಮೇಲೆ ಹೇಗೆ ಹಲ್ಲೆ ನಡೆಯುತ್ತದೋ ಹಾಗೆಯೇ ದೇಸಿ ಧಾರ್ಮಿಕ ಪರಂಪರೆಯ ಮೇಲೆ, ನಮ್ಮ ಸ್ನೇಹಿತರು ಹೇಳಿದ ಹಾಗೆ ``ಜಾನಪದ ಇಸ್ಲಾಮಿನ’’ ಮೇಲೆ ದಾಳಿ ಮಾಡುತ್ತಿರುವವರು ತಥಾಕಥಿತ `ಶಿಕ್ಷಣ ಪಡೆದ’ ಮುಸಲ್ಮಾನರು.
ನಾವು ಆಧುನಿಕ -ಲಿಬರಲ್ ಇಸ್ಲಾಂನವರು, ಧರ್ಮವನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತಿರುವವರು ಎಂದು ಹೇಳಿಕೊಳ್ಳುವವರು, ದೊಡ್ಡ ದೊಡ್ಡ ಸಭೆಗಳಲ್ಲಿ ಭಾಷಣ ಹೊಡೆಯುವವರು, ಈ ರೀತಿಯ ಹಬ್ಬ- ಉರುಸುಗಳನ್ನು ಕೀಳಾಗಿ ನೋಡುತ್ತಾರೆ. ಈ ದೇಶದಲ್ಲಿ ಇಸ್ಲಾಂ ಹರಡಿದ್ದೇ ಸೂಫಿ ಸಂತರಿಂದಾಗಿ ಎಂಬುದನ್ನು ಅರಿಯದೇ ಮಾತಾಡುತ್ತಾರೆ.
ಇಂತಹ ಜಾಗೃತ ಸ್ಥಳಗಳಿಂದ ಸೌಹಾರ್ದ ಹೆಚ್ಚುವುದು ಎನ್ನುವುದನ್ನು ಮರೆತು, ಪ್ಯೂರಿಟನ್ ಇಸ್ಲಾಂ ನ ಪ್ರತಿಪಾದಕರಾಗುತ್ತಾರೆ. ``ನಮ್ಮಪ್ಪ -- ಅಜ್ಜ ತಪ್ಪು ಮಾಡಿರಬಹುದು, ನಾನು ಮಾಡುವುದಿಲ್ಲ,’’ ಎಂಬ ಹುಂಬತನದ ಮಾತಾಡುತ್ತಾರೆ.
ಇಂತಹ ಶಿಕ್ಷಿತರು ದರ್ಗಾಗಳಿಗೆ, ಸೂಫಿಗಳಿಗೆ ಸಂಬಂಧ ಪಟ್ಟ ಸ್ಥಳಗಳಿಗೆ ಹೋಗುವುದು ತಪ್ಪು, ಅದೆಲ್ಲ ನಮ್ಮ ಪವಿತ್ರ ಪುಸ್ತಕದಲ್ಲಿ ಬರೆದಿಲ್ಲ ಅಂತೆಲ್ಲ ಕಮ್ಮಿ ಓದಿದ ಮಸಲ್ಮಾನರ ತಲೆಯಲ್ಲಿ ತುಂಬುತ್ತಾರೆ. ಇದರ ಅಪಾಯಗಳು ನಮ್ಮೆಲ್ಲರಿಗೂ ಎಷ್ಟು ಬೇಗ ಅರ್ಥ ವಾಗುತ್ತದೆಯೋ ಅಷ್ಟು ಒಳ್ಳೆಯದು.
ಇಂತಹುದೇ ಮಾತುಗಳನ್ನು ಲಿಂಗ, ಭಾಷೆ, ಜನಾಂಗ, ಹಾಗೂ ಇತರ ಅಲ್ಪಸಂಖ್ಯಾತರ ಬಗ್ಗೆ ಹೇಳಬಹುದು. ಇಂತಹ ಗುಂಪುಗಳಿಗೆ ತಮ್ಮ ತಮ್ಮಲ್ಲಿ ಏಕತೆ ಎಷ್ಟು ಮುಖ್ಯವೋ, ಒಂದು ಗುಂಪು ಇತರ ಗುಂಪುಗಳೊಂದಿಗೆ ಏಕತೆ, ಸಾಹಚರ್ಯ ಸಾಧಿಸುವುದೂ ಅಷ್ಟೇ ಮುಖ್ಯ.
ಬಹುಸಂಖ್ಯಾತರ ಬಲವನ್ನು ನಾವು ಎಷ್ಟು ಸಂದೇಹದಿಂದ ನೋಡುತ್ತೇವೋ, ಅಲ್ಪ ಸಂಖ್ಯಾತರ ನಡುವಿನ ಇಂತಹ ಕಂದಕಗಳನ್ನೂ ನಾವು ಸಂಶಯದಿಂದ ನೋಡಬೇಕು. ಬಹುಸಂಸ್ಕೃತಿಯ ಸಹಬಾಳ್ವೆ ಸಾಧ್ಯವಾಗಿಸುವುದು ಇಬ್ಬರದೂ ಜವಾಬುದಾರಿ. ಸಮ ಸಮಾಜದ ದಾರಿಯಲ್ಲಿ ಬಿದ್ದ ಕಲ್ಲುಗಳನ್ನು ಎತ್ತಿಡುವುದು ಎರಡೂ ಕೈಗಳ ಕೆಲಸ.
ಕೊನೆಯದಾಗಿ, ಬಹುಸಂಖ್ಯಾತರ ಬಗ್ಗೆ ಅಲ್ಪಸಂಖ್ಯಾತರಲ್ಲಿ ಇರಬಹುದಾದ ಅಂಜಿಕೆಗಳನ್ನಾಗಲೀ, ಇವರಿಗೆ ಅವರ ಬಗ್ಗೆ ಇದ್ದಿರಬಹುದಾದ ಸಂದೇಹಗಳನ್ನಾಗಲೀ ಕೊನೆಗಾಣಿಸುವ ಸರಳ ವಿಧಾನವೆಂದರೆ ಮಾತುಕತೆ. ಇದು ಸರಕಾರಿ ಪ್ರಾಯೋಜಿತ ಸಭೆಗಳಲ್ಲಿ, ಹಾರ ಹಾಕಿಸಿಕೊಂಡು, ಸ್ವಾಗತ ಮಾಡಿಸಿಕೊಂಡು ನಾಯಕರು, ಚಿಂತಕರು ಮಾಡುವ ಮಾತುಕತೆಗಳಲ್ಲ. ಜನರ ನಡುವೆ, ಅಕ್ಕ – ಪಕ್ಕದವರ ನಡುವೆ ದಿನ ನಿತ್ಯ ಆಗಬಹುದಾದ ಮಾತುಕತೆಗಳು. ಇದೇನೂ ನಮ್ಮ ಸಮಾಜಕ್ಕೆ ಹೊಸದಲ್ಲ. ಸಾವಿರಾರು ವರ್ಷಗಳಿಂದ ನಾವು ಇದನ್ನು ಮಾಡುತ್ತಾ ಬಂದವರು. ನಮ್ಮ ಅಜ್ಞಾನದಿಂದಾಗಿ ದೊಡ್ಡವರಾದ ಚಿಂತಕರು ಹಾಗೂ ನಮ್ಮ ಸೀಮಿತ ಆಯ್ಕೆಗಳಿಂದಾಗಿ ರಾಜಧಾನಿಗಳಿಗೆ ಹೋದ ದೊಡ್ಡ ನಾಯಕರು ನಮ್ಮ ತಲೆ ಕೆಡಿಸಿದ್ದಕ್ಕಾಗಿ ಈ ಮಾತುಕತೆಯ ಪರಂಪರೆಗೆ ಸ್ವಲ್ಪ ಮಟ್ಟಿಗೆ ನಿಲುಗಡೆ ಆಗಿದೆ. ದೊಡ್ಡವರನ್ನು ಅವರ ಪಾಡಿಗೆ ಬಿಟ್ಟು ನಾವು ನಮ್ಮಜ್ಜ- ಮುತ್ತಾತಂದಿರು ಮಾಡುತ್ತಿದ್ದ ಹಾಗೆ ಸಹಜ – ಸರಳ ಮಾತುಕತೆಗಳನ್ನು ಆರಂಭಿಸಿದರೆ, ಒಬ್ಬರು ಇನ್ನೊಬ್ಬರ ಮನೆಗೆ ಹೋಗಿ- ಬಂದು ಮಾಡಿದರೆ, ದಿನ ನಿತ್ಯದ ಕೆಲಸಗಳನ್ನು ಒಂದಾಗಿ ಮಾಡಿದರೆ, ಪರಿಸ್ಥಿತಿ ಎಷ್ಟೋ ಸುಧಾರಿಸಬಹುದು. ನಾವು ಮಾಡಬಹುದಾದ ಅನೇಕ ತಪ್ಪುಗಳನ್ನು ತಪ್ಪಿಸಬಹುದು. ಇದನ್ನು ತಿಳಿಯಲು ಯಾವುದೋ ಕ್ಲಿಷ್ಟಕರ ವಾದ ಸೂತ್ರ ಬೇಕಾಗಿಲ್ಲ. ಇದು ಸಾಮಾನ್ಯ ಜ್ಞಾನದ ವಿಷಯ.
ಇದು ಮುಗಿಯಲಾರದ ಸಂಭಾಷಣೆಗೆ. ಇದಕ್ಕೆ ಕೊನೆಯ ಮಾತು ಎಂಬುದು ಉಂಟೇ? ಆದರೂ ಒಂದು ಮಾತನ್ನು ಮತ್ತೆ ಮತ್ತೆ ಆಡಿಕೊಳ್ಳಬಹುದು.
ಬಹುಸಂಸ್ಕೃತಿ ಎನ್ನುವುದು ಒಂದು ಚಂದದ ಕಾಮನ ಬಿಲ್ಲು ಎನ್ನುವುದಾದರೆ, ಎಲ್ಲಾ ಬಣ್ಣಗಳೂ ತಮ್ಮ ತಮ್ಮ ಸ್ಥಾನದಲ್ಲಿ ಇರಬೇಕಲ್ಲವೇ? ತಮ್ಮ ತಮ್ಮ ಮೂಲ ವರ್ಣದ ಹೊಳಪನ್ನು ಹೊರ ಹೊಮ್ಮಬೇಕಲ್ಲವೇ? ಅವುಗಳ ಸಾಲಿನಲ್ಲಿ ಒಂದು ಹೆಚ್ಚು ಕೆಲಸ ಮಾಡಿ, ಇನ್ನೊಂದು ಸೋಮಾರಿಯಾಗಿ ಉಳಿದರೆ ಕಾಮನ ಬಿಲ್ಲನ್ನು ನೋಡಿ ಬೆಳೆಯುವ ಎಳೆಯರಿಗೂ ಅನ್ಯಾಯ, ಬಣ್ಣಗೇಡಿಯಾದ ಕಾಮನ ಬಿಲ್ಲಿಗೂ ಬೇಜಾರು.
ಆದರೆ ಇದನ್ನು ತಪ್ಪಿಸಲು ಇನ್ನೂ ಅನೇಕ ಅವಕಾಶಗಳು ಇವೆ. ಕಾಲ ಇನ್ನೂ ಮಿಂಚಿ ಹೋಗಿಲ್ಲ ವೆನ್ನುವುದೇ ನಮಲ್ಲಿ ಆಶಾಭಾವನೆ ಮೂಡಿಸುವ ಸಂಗತಿ.
ಎಲ್ಲರಿಗೂ ನಮಸ್ಕಾರ. ಧನ್ಯವಾದಗಳು.
ಹೃಷಿಕೇಶ ಬಹದ್ದೂರ ದೇಸಾಯಿ
ವರದಿಗಾರರು, ದಿ ಹಿಂದೂ, ಬೀದರ್
ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ
ಎಪ್ರಿಲ್ 18, 2017
--
Comments