ಭಾಷಾಭಿಮಾನ ಕೆರಳಿದಾಗ ಏನು ಕುಡಿಯಬೇಕು?

ಭಾಷಾಭಿಮಾನ ಕೆರಳಿದಾಗ ಏನು ಕುಡಿಯಬೇಕು?


ಬೆಂಗಾವಲೂರಿನ ಪಂಚತಾರಾ ಹೊಟೆಲೊಂದರಲ್ಲಿ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಭಾಷಣ ಮಾಡುತ್ತಿದ್ದರು. ಹೊರಗೆ ಜೋರಾಗಿ ಮಳೆಯಿದ್ದರೂ ಒಳಗೆ ವಾತ ಅನಾನುಕೂಲಿತ ಎಸಿ.
ಅಂಥಾದ್ದರಲ್ಲಿ ನಾವು ಬಿಸಿ ಬಿಸಿ ಸೂಪು ಕುಡಿಯುತ್ತ ಅವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದೆವು.
``ಭಾರತದ ಎಲ್ಲ ಭಾಷೆಗಳ ತಾಯಿ ಸಂಸ್ಕೃತ. ಎಲ್ಲಾ ಭಾಷೆಗಳ ಮೇಲೆ ಇದರ ಪ್ರಭಾವ ತಪ್ಪಿಸಿಕೊಳ್ಳಲಾರದಷ್ಟು ಇದೆ,’’ ಅಂತ ಹೇಳಿದರು. ನಾವು ಸೂಪಿನ ಬಟ್ಟಲನ್ನು ಕೆಳಗಿಟ್ಟು ಚಪ್ಪಾಳೆ ಹೊಡೆದೆವು. ಅಂತಹ ಚಳಿಯಲ್ಲೂ ನಮ್ಮ ಭಾಷಾಭಿಮಾನ ಸಣ್ಣಗೆ ಕೆರಳುತ್ತಿತ್ತು.

ಆ ನಂತರ ಸ್ಥಳೀಯ ಪ್ರತಿಭೆಯೊಬ್ಬರು ಭಾಷಣ ಆರಂಭಿಸಿದರು. ``ಕನ್ನಡದ ಶಬ್ದಕೋಶದಲ್ಲಿ ಶೇಕಡಾ 98 ರಷ್ಟು ಸಂಸ್ಕೃತ ಶಬ್ದಗಳಿವೆ’’, ಎಂದರು. ಇವರ ಮಾತಿಗೆ ಚಪ್ಪಾಳೆ ಹೊಡೆಯಬೇಕೋ, ಸುಮ್ಮನೇ ಸೂಪು ಕುಡಿಯಬೇಕೋ ಎಂದುಕೊಳ್ಳುತ್ತಿದ್ದಂತೆ ಸಂಪಾದಕರ ಫೋನು ಬಂತು. ``ಈ ಮನುಷ್ಯ ತಾನೂ ನಿದ್ದೆ ಮಾಡುವುದಿಲ್ಲ, ಬೇರೆಯವರಿಗೂ ಮಾಡಿಸಿಕೊಡುವುದಿಲ್ಲ’’ ಅಂತ ಅಂದುಕೊಳ್ಳುತ್ತಾ ಹೊರಗೆ ಹೋಗಿ, ಫೋನು ತೊಗೊಂಡೆ.

ನಮ್ಮ ಕನ್ನಡದ ಕಲಿಗಳು ಮೆಟ್ರೊ ರೈಲಿನಲ್ಲಿದ್ದ ಹಿಂದಿ ಫಲಕಗಳನ್ನು ಆವೇಶ-ಆಕ್ರೋಶದಿಂದ ಕಿತ್ತೊಗೆದ ಹಿನ್ನೆಲೆಯಲ್ಲಿ ಸಂಪಾದಕರು ಫೋನು ಮಾಡಿದ್ದರು.

``ಎನ್ರೀ ರೀ, ಏಗಿದ್ದೀರಿ? ಈ ಉಟ್ಟು ಓರಾಟಗಾರರು ಎಲ್ಲಾ ನಮ್ಮ ಫ್ರೆಂಡ್ಸೂ. ಅವರು ಈ ಇಂದೀ- ಹುರ್ದು- ಪರ್ಷಿಯನ್ ಪದಗಳನ್ನು ಭಳಸದೇ ಭದುಕಬೇಕು ಅಂತಾ ಡಿಸೈಡು ಮಾಬಿಟ್ಟವ್ರೇ. ಹಂಥವರೆಲ್ಲಾ ಹೇನು ಮಾಡಬೌದು ಆಗೂ ಹೇನು ಮಾಡಬಾರದು ಎನ್ನುವುದರ ಬಗ್ಗೆ ಒಂದು ಕೆಲವು ಡೂಸು ಹಾಗೋ ಡೋಂಟ್ಸು ಬರೆದು ಕೊಡಿ’’ ಅಂತ ಕೇಳಿದರು. ನನಗೆ ಇಲ್ಲವೆನ್ನಲು ಆಗಲಿಲ್ಲ.
`ಹೌ ಟು ಸೇ ನೋ ವೆನ್ ಯು ವಾಂಟ್ ಟು ಸೇ ಎಸ್’ ಎನ್ನುವ ಪುಸ್ತಕ ಓದೋಣ ವೆಂದರೆ ಆಕೃತಿ ಗುರು ಅವರು ಅದನ್ನು ನನಗಿನ್ನೂ ಕಳಿಸಿಯೇ ಇಲ್ಲ.

ಎಲ್ಲ ವರದಿಗಾರರೂ ಯೋಚಿಸುವಂತೆ, ``ನಾಳೆ- ನಾಡಿದ್ದು ಬರೆದರಾಯಿತು, ಯಮನ ದೂತರು ಬಂದು ಕೇಳಿದಾಗ ಕೊಟ್ಟರಾಯಿತು,’’ ಎಂದುಕೊಂಡೆ. ತಕ್ಷಣಕ್ಕೆ ಒಂದಿಷ್ಟು ಪಾಯಿಂಟು ಮಾಡಿಟ್ಟುಕೊಂಡೆ. ಅವು ಇಲ್ಲಿವೆ.
ಇಂಥವರು ಎದ್ದ ಕೂಡಲೇ ಕಾಫಿ ಕುಡಿಯಬಾರದು. ಚಹಾನೂ ನಿ಼ಷಿದ್ಧ. ಯೋಗೇಶ ಮಾಸ್ಟರ್ ಅವರ ರಾಜಮಾರ್ಗದಲ್ಲಿ ನಡೆಯುತ್ತಾ ತಾಮ್ರದ ಗಿಂಡಿಯಲ್ಲಿ ಸಾಸಿವೆ ನೀರು ಕುಡಿಯಬೇಕು. ಅದಕ್ಕೆ ಅಜವಾನ- ಜೀರಿಗೆ, ಲವಂಗ, ಇತ್ಯಾದಿ ಗಳನ್ನು ಹಾಕಬಾರದು.

ಹೆಂಡತಿ ಹೇಳಿದಳೆಂದು ತಾಜಾ ತರಕಾರಿ ಖರೀದಿ ಮಾಡಲಿಕ್ಕೆ ಹೋಗಬಾರದು.
ತಾನು ತರದೇ ಇದ್ದರೇನು, ಇವರು ತರಲಿ ಅಂತೇಳಿ ಹೆಂಡತಿ ಮಕ್ಕಳನ್ನು ಬಾಜಾರಿಗೆ ಕಳಿಸಬಾರದು. ಕಳಿಸಿದರೂ ರೂಪಾಯಿ, ಪೈಸೆ, ವಗೈರೆ ಕೊಡಬಾರದು. ಕೊಟ್ಟರೂ ಚಿಲ್ಲರೆ ವಾಪಸ್ ಕೇಳಬಾರದು. ಸುಮ್ಮನೇ ಶಾರುಖ್ ಖಾನನ ಮಾತು ಕೇಳಿ ಆನುಲೈನಿನಲ್ಲಿ ಕೊಂಡುಕೊಳ್ಳುವುದು ಒಳಿತು.
ಕ್ಯಾಷ್ ಲೆಸ್ ಇಂಡಿಯಾ ಗೆ ಜೈ ಅನ್ನಬೇಕು. ಜಿಂದಾಬಾದ್ ಅನ್ನಬಾರದು.

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಅಂತ ಬಂದ್ ಮಾಡಬಾರದು. ಹರತಾಲಕ್ಕೆ ಇಳಿಯಬಾರದು. ಇಂಟರ್ ನೆಟ್ಟಿನಲ್ಲಿ ಆಗಾಗ ಹುಟ್ಟುವ ಹ್ಯಾಷ್ ಟ್ಯಾಗಗಳಿಗೆ ಲೈಕ್ ಮಾಡಿ ಸಂತೋಷ ಪಡಬೇಕು. ನಮ್ಮಂತಹ ಹತ್ತು ಜನರಿಗೆ ಹೇಳಿಕೊಂಡು ಪ್ರೊಫೈಲು ಚಿತ್ರ ಬದಲಿಸುತ್ತಿರಬೇಕು.

ಯಾರಾದರು ನಿಮ್ಮ ವಿಳಾಸ ಕೇಳಿದರೆ, ನಿಮ್ಮದು ಯಾವ ಗಲ್ಲಿ, ಯಾವ ಚೌಕು, ಯಾವ ತಾಲೂಕು, ಯಾವ ಜಿಲ್ಲೆ, ಕಸಬಾ ಹೋಬಳಿ ಅಂತೆಲ್ಲಾ ಹೇಳ್ತಾಕೂಡಬಾರದು.

ಅಲ್ಲಿ ಧಾರಾಳವಾಗಿ ಮನೆ ಕಟ್ಟಬಹುದು. ಆದರೆ ಅದನ್ನು ಯಾವ ಕಾರಣಕ್ಕೂ ಬಾಡಿಗೆ ಕೊಡಬಾರದು. ಕೊಟ್ಟರೂ ಪುಕ್ಕಟೆ ಆಗಿ ಕೊಡಬಾರದು, ಹಾಗೆಂದು ಅದಕ್ಕೆ ಇಂತಿಷ್ಟು ಬಾಡಿಗೆ ಎಂದು ಬಾಡಿಗೆದಾರರಿಂದ ರೊಕ್ಕ ವಸೂಲು ಮಾಡಬಾರದು.

ಆ ಮನೆಯಲ್ಲಿ ಮೇಜು, ಕುರ್ಚಿ, ಕಪಾಟು, ತಿಜೋರಿ, ದಿವಾನ, ಬೆಡ್ ರೂಮಿನಲ್ಲಿ ಚಾದರ, ಬಾತು ರೂಮಿನಲ್ಲಿ ಸಾಬೂನು, ಇವು ಯಾವುವೂ ಇರಬಾರದು. ಒಂದು ಹೋಲ್ಡಾಲು, ಒಂದೆರಡು ಲೋಡುಗಳು ಇರಬಹುದು. ಹುಳಿಬಂದ ಹಾಲಿನಲ್ಲಿ ಮೀಸೆ ಬೋಳಿಸಬಹುದು. ಆದರೆ ದಾಡಿ ಮಾಡಿಕೊಳ್ಳಬಾರದು. ಬೇವಿನ ಕಡ್ಡಿಯಿಂದ ಎಷ್ಟಾದರೂ ಹಲ್ಲು ತಿಕ್ಕಬಹುದು.

ಜೀವನದಲ್ಲಿ ಯಾವುದೇ ಕೆಲಸ ಶುರು ಮಾಡಬಾರದು. ಆರಂಭಿಸಿ, ಮುಕ್ತಾಯ ಮಾಡಬಹುದಷ್ಟೇ. ಯಾವ ತರಬೇತಿಯನ್ನೂ ಪಡೆಯಬಾರದು. ತರಬೇತಿಗಾಗಿ ಸರಕಾರವನ್ನೂ ಅವಲಂಬಿಸಬಾರದು, ಖಾಸಗಿಯವರ ಕಡೆಗೂ ಹೋಗಬಾರದು.

ಮನೆಯಲ್ಲಿ ಗಣಪತಿ ಕೂಡಿಸಬಹುದು. ಗಲ್ಲಿಯಲ್ಲಿ ಕೂಡಿಸಬಾರದು. ಊರಿನಲ್ಲಿ ರಾಜ್ಯೋತ್ಸವ ಮಾಡಬಹುದು. ಆದರೆ ಇಂಥದಕ್ಕೆಲ್ಲಾ ಚಂದಾ ಎತ್ತಬಾರದು. ಮನೆಯಲ್ಲಿ ಗಂಡು ಮಕ್ಕಳ ಜವಳ ಮಾಡಬಹುದು. ಅವರಿಗೆ ಜುಲುಪಿ ಬಿಡಿಸಬಾರದು. ಮಕ್ಕಳಿಗೆ `ಸಾಯಿ ರಾಮ’, `ಮಂಜು ಸಾಯಿನಾಥ’, `ಸಾಯಿ ಸತ್ಯನಾರಾಯಣ’ ಅಂತೆಲ್ಲಾ ಹೆಸರಿಡಬಾರದು.

ಮಕ್ಕಳನ್ನು ಸರಕಾರಿ ಶಾಲೆಗೂ ಹಾಕಬಾರದು, ಖಾಸಗಿ ಶಾಲೆಗೂ ಹಾಕಬಾರದು. ಅವರು ಡೈರೆಕ್ಟಾಗಿ ಕಾಲೇಜಿಗೆ ಹೋಗಬೇಕು. ಕಾಲೇಜಿನಲ್ಲಿ, ಯುನಿವರ್ಸಿಟಿಯಲ್ಲಿ ಯಾರಿಗು `ಐ ಲವ್ ಯೂ’ ಅಂತನೋ, `ಪಿಚ್ಚರ್ ನೋಡೋಣ’, `ಕ್ಲಾಸಿನ ನಂತರ ಲಾಲ್ ಬಾಗಿಗೆ ಹೋಗೋಣ’ ಅಂತೆಲ್ಲಾ ಚೀಟಿ ಬರೆಯಬಾರದು.

ಯಾವ ನೌಕರಿಯೂ ಮಾಡಬಾರದು, ನೌಕರಿಗೆಂತ ಕಚೇರಿಗೆ ಹೋಗಬಾರದು. ಹೋದರೂ ಒಂದೇ ಹಾದಿಯಲ್ಲಿ ಹೋಗಬಾರದು. ಒಂದು ದಿನ ಹೋದ ದಾರಿಯನ್ನು ಮರು ದಿನ ಬದಲು ಮಾಡಬಾರದು.

ಕಚೇರಿಯಲ್ಲಿ ಜಗಳ ಮಾಡಬಾರದು. ಮಾಡಿದರೂ ಸಂಭಾಳಿಸಿಕೊಂಡು ಹೋಗಬಾರದು. ರಜೆ ಹಾಕಬಾರದು, ರಾಜಿನಾಮೆ ಕೊಡಬಾರದು. ನಾಕರಿ ಬಿಟ್ಟು ಯಾವುದಾದರೂ ಧಂಧೆ ಮಾಡಿಗೀಡಿಯಾರು ಮತ್ತೆ. ಏನು ಮಾಡಿದರೂ ಆಮದು, ರಫ್ತು ಮಾಡಬಾರದು, ಫಾಯದೆ – ಲುಕ್ಸಾನದ ವಿಚಾರ ಮಾಡಬಾರದು. ದುಡ್ಡು ಗಳಿಸಿದರೂ ತಿಜೋರಿಯಲ್ಲಿ ಇಡಬಾರದು. ನಿಜ ಹೇಳಬೇಕೆಂದರೆ, ಜೀವನದಲ್ಲಿ ಜಮಾ -ಖರ್ಚು ಏನೂ ಮಾಡಬಾರದು.

ಪಂಚಾಂಗ ನೋಡಬಹುದು. ಆದರೆ ತೇಜಿ – ಮಂದಿ ಲೆಕ್ಕ ನೋಡಬಾರದು. ಸಿ ಆಂಡ್ ಎಫ್ ಎಜೆಂಟ್ ಆಗಬಹುದು, ಆದರೆ ಯಾವುದೇ ಸಾಮಾನು ತರಬಾರದು, ಗೋದಾಮಿನಲ್ಲಿ ಮಾಲು ಇಳಿಸಬಾರದು,

ಅತಿಥಿಗಳು ಬಂದರೆ ಮೇಜವಾನಿ ಮಾಡಬಾರದು. ಕಷಾಯ -ಪಾಯಸ – ಪಾನಕ ನೀಡಿ ಸಾಗಹಾಕಬೇಕು.
ರೊಟ್ಟಿ, ಚಪಾತಿ, ಪೂರಿ, ಸಾಗು, ಚಟ್ನಿ, ಸಾಂಬಾರು, ದಾಲ್ – ಸಬ್ಜಿ, ಭಜಿ, ಭಾಜಿ, ಬಜ್ಜಿ, ಖೀರು- ಕೂರ್ಮಾ, ಮೆಣಸಿನಕಾಯಿ ಬಜ್ಜಿ, ಪುಲಾವು, ಬಿರಿಯಾನಿ ಇವು ಯಾವನ್ನೂ ಮಾಡಬಾರದು. ಇಡ್ಲಿ ಮಾಡಬಹುದು, ವಡಾ ಮಾಡಬಾರದು. ದಹೀ ವಡಾ- ತಹಿರ್ ವಡಾ ಗಳನ್ನು ಮಾಡಬಾರದು - ತಿನ್ನಬಾರದು.  

ಯಾವ ಅಡಿಗೆಗೂ ಮಸಾಲೆ ಹಾಕಬಾರದು. ನಮ್ಮಜ್ಜಿ ಮಾಡಿದಂತೆ ಒಂದೆರಡು ಕಾಳು ಉಪ್ಪು- ಮೆಣಸಿನಕಾಳು ಹಾಕಿ ಅನ್ನ- ಗಂಜಿ ಮಾಡಿಕೊಳ್ಳಬಹುದು. ಅದು ಆರೋಗ್ಯಕ್ಕೂ ಒಳ್ಳೆಯದು. ಡೌಟು ಬಂದರೆ ರುಜುತಾ ದಿವೇಕರ್ ಅವರನ್ನು ಕೇಳಬಹುದು.

ದಿನಾಲೂ ಮನೆಯಲ್ಲಿ ಮ್ಯಾಗಿ- ಓಟ್ಸು ತಿಂದುಕೊಂಡು ಇರಬಹುದೇನೋ. ಬೆಲ್ಲದ ನೀರಿನ ಪಾನಕ ಕುಡಿಯಬಹುದು.  ಗೋವಿನ ಹಾಲು, ಮೂತ್ರ, ಸೆಗಣಿ ಮಾತ್ರ ಯಾವುದೇ ಕಾರಣಕ್ಕೂ ಬಳಸಬಾರದು. ಜ್ವರ ಕೆಮ್ಮ ನೆಗಡಿ ಬಂದರೆ ಮತ್ತೆ ಅಜ್ಜಿಯ ಕಷಾಯ ಕುಡಿಯಬೇಕು. ದವಾಖಾನೆಗೆ ಹೋಗಬಾರದು. ಹೋದರೂ ಔಷಧಿ ಕುಡಿಯಬಹುದು. ಗುಳಿಗೆ ನುಂಗಬಾರದು. 

ನಾವೆಲ್ಲ ಕಂಠೀ ಹಾರ ಹಾಕಬಹುದು, ಎಲ್ಲ ಬೆರಳುಗಳಿಗೆ ಉಂಗುರು ಹಾಕಬಹುದು. ಆದರೆ ಅಂಗುಷ್ಟಕ್ಕೆ ಉಂಗುರ ಹಾಕಬಾರದು. ಸೀರೆ ಉಟ್ಟುಕೊಳ್ಳಬಾರದು, ರೇಷಿಮೆ ಸೀರೆಯಂತೂ ಮೊದಲು ಉಡಬಾರದು.
ಷರಟು, ಪ್ಯಾಂಟು ಧರಿಸಬಹುದು. ಷರಾಯಿ, ಜುಬ್ಬಾ, ಪೈಜಾಮಾ, ಲಂಗ, ಲುಂಗಿ, ಲಂಗೋಟಿ ಇವು ಯಾವುದನ್ನೂ ಧರಿಸಬಾರದು. ಯಾರಿಗೂ ಟೋಪಿ ಹಾಕಬಾರದು, ಹಾಕಿಸಿಕೊಳ್ಳಬಾರದು.

ಯಾವ ಸರಕಾರಿ ಕಚೇರಿಗೂ ಹೋಗಬಾರದು. ತಹಶೀಲ್ದಾರ್ ರನ್ನು ಭೇಟಿ ಆಗಬಾರದು, ತಾಲೂಕು ಅಧಿಕಾರಿಗೆ ಲಂಚ ಕೊಡಬಾರದು. `ನಮ್ಮ ಜಮೀನನ್ನು ಮೋಜಣಿ ಮಾಡಬೇಕಾಗಿದೆ’ ಎಂದು ಜಿಲ್ಲಾಧಿಕಾರಿಗೆ ಅರ್ಜಿ ಕೊಡಬಾರದು. `ನಮ್ಮ ಖಾತಾ ಬದಲಾವಣೆ ಮಾಡಿ’, `ಪಟ್ಟಾ ಕಾಪಿ ಕೊಡಿ’, `ನಮ್ಮ ಜಮೀನನ್ನು ಬಿನ್ ಖೇತಿ ಮಾಡಿಕೊಡಿ’ ಅಂತೆಲ್ಲಾ ಪತ್ರ ಬರೆಯಬಾರದು. 

ಸರಕಾರಿ ಖಜಾನೆಗೆ ಹೋಗಬಾರದು. ಅಲ್ಲಿ ಹೋಗಿ `ನನಗೆ ಪಗಾರ ಬಂದಿಲ್ಲ’ `ಆ ಭತ್ತೆ ಬಂದಿಲ್ಲ, ಈ ಭತ್ತೆ ಸಿಕ್ಕಿಲ್ಲ’, ಅಂತೆಲ್ಲಾ ದೂರು ನೀಡಬಾರದು. ಅಥವಾ `ಹೋದ ವರ್ಷದ ಪೇಪರ್ ವ್ಯಾಲ್ಯುವೇಷನ್ನಿನಲ್ಲಿ ನನಗೆ ನೂರು ರಾಪಾಯಿ ಕಡಿಮೆ ಬಂದಿದೆ. ನನ್ನ ಖಾತೆಗೆ ಜಮಾ ಮಾಡಿ ಅಂತೆಲ್ಲ ಕೇಳಬಾರದು. ಕೊನೆಯತನಕ ಬಡವರಾಗಿರಲು ಅಡ್ಡಿ ಇಲ್ಲ. ಯಾವ ಕಾರಣಕ್ಕೂ ಸಾಹುಕಾರರಾಗಬಾರದು.

ಸರಕಾರಕ್ಕೆ ಯಾವ ಪತ್ರ ವನ್ನೂ ಬರೆಯಬಾರದು. ಬರೆದರೂ ಆ ಪತ್ರವನ್ನು `ಮೆಹರಬಾನ್ ಸಾಹೇಬರಿಗೆ’, `ಖಾವಂದರಿಗೆ’, ಅಂತೆಲ್ಲಾ ಶುರು ಮಾಡಬಾರದು. ``ನಮ್ಮದು ಐದು ಎಕರೆ, ಮೂರು ಗುಂಟೆ ಜಮೀನು ಇದ್ದು, ಇದರ ಜಮಾ ಬಂದಿ ಮಾಡಬೇಕು, ಅದರ ಸುತ್ತ ಚಕ್ಕ ಬಂದಿ ಮಾಡಬೇಕು, ಐದು ಮಂದಿ ಸಾಕ್ಷಿಗಳನ್ನು ಕರೆದು ಪಂಚನಾಮೆ ಮಾಡಬೇಕು’’ ಎಂದೆಲ್ಲಾ ಕೇಳಬಾರದು. ``ನಮ್ಮೂರಿನಲ್ಲಿ ನಮ್ಮ ರೈತನ ಬಡ ಕುಟುಂಬದವರು ಕೆಲವು ಎಕರೆ ಜಂಗಲ್ ಭೂಮಿಯನ್ನು ಬಗೈರ್ ಹುಕುಂ ಸಾಗುವಳಿ ಮಾಡುತ್ತಿದ್ದು ಅದನ್ನು ಖಾಸಾ ಪಹಣಿ ಮಾಡಿಕೊಡಬೇಕಾಗಿ ವಿನಂತಿ’’ ಎಂದೆಲ್ಲಾ ಬೇಡಿಕೊಳ್ಳಬಾರದು.

``ನಮ್ಮೂರಿಗೆ ರಸ್ತೆ ಇಲ್ಲ. ರಸ್ತೆ ಮಾಡಿಕೊಡಿ’’ ಎಂದು ವಿನಂತಿ ಮಾಡಬಾರದು. ``ನಮ್ಮೂರಿನ ಗೈರಾಣ-ಗೌಠಾಣ ಜಮೀನು ಯಾರಿಗೋ ಪರಭಾರೆ ಆಗಿದೆ. ಅದನ್ನು ಉಳಿಸಿ’’ ಎಂದು ಕೇಳಿ ಕೊಳ್ಳಬಾರದು.

ದಿವಾಣಿ ನ್ಯಾಯಾಲಕ್ಕೆ ಹೋಗಿ ವಕೀಲರನ್ನು ಭೇಟಿ ಆಗಬಾರದು. ಮುನ್ಸೀಫರ ಮುಂದೆ ಹೋಗಿ ಅವರು ನಿಮ್ಮ ಪರವಾಗಿ ಮೊಕದ್ದಮೆ ನಡೆಸಲು ವಕಾಲತ್ ನಾಮಾ ಕೊಡಬಾರದು. `ನಮ್ಮ ಜಾಗವನ್ನು ಇಂಥಿಂಥವರು ಕಬ್ಜಾ ಮಾಡುತ್ತಿದ್ದಾರೆ, ಅದನ್ನು ಖುಲ್ಲಾ ಮಾಡಿಸಿಕೊಡಿ’ ಅಂತ ಕೇಳಿಕೊಳ್ಳಬಾರದು. ನ್ಯಾಯಾಧಿಶ ಸಾಹೇಬರು ಫಿರ್ಯಾದಿಯ ಮನೆಗೆ ಬೇಲೀಫರನ್ನು ಕಳಿಸಬಹುದು. ಜವಾನನ್ನು ಕಳಿಸಬಾರದು.

ನಿಮಗೆ ಏನಾದರೂ ಸಮಸ್ಯೆ ಬಂತು ಅಂತ ಪೋಲಿಸ್ ಠಾಣೆಗೆ ಹೋಗಬಾರದು. ಅಲ್ಲಿಯ ಚೌಕೀದಾರರನ್ನೋ, ಫೌಜುದಾರರನ್ನೋ, ದಫೇದಾರರನ್ನೋ ಭೇಟಿ ಆಗಬಾರದು. `ಇಂಥವರು ಖೂನಿ ಮಾಡಿದ್ದಾರೆ,’ `ಇಂಥ ಡಾಕುಗಳು ಧಾಂಧಲೆ ಮಾಡಿದ್ದಾರೆ’, `ನಮ್ಮ ಊರಿನ ನಾಕಾದಲ್ಲಿ ಗದ್ದಲ ಹಾಕಿದ್ದಾರೆ,’ ``ನಮ್ಮ ಊರಿನ ಹನುಮಂತ ದೇವರ ಕೂಟಿನಲ್ಲಿ ಕಾನೂನು ಭಂಗ ಮಾಡಿದ್ದಾರೆ’, `ಇಂಥವರ ವಿರುದ್ಧ ಮೊಕದ್ದಮೆ ದಾಖಲಿಸಿ’ ಅಂತೆಲ್ಲಾ ಅರ್ಜಿ ಕೊಡಬಾರದು.

ಯಾರಿಗಾದರೂ ಬೈಯ್ಯುವಾಗ ಕೇರ್ ಫುಲ್ ಆಗಿರಬೇಕು. `ಯಾಕೋ ನನ್ ಮಗನೆ, ಮೈಯಲ್ಲಿ ಹುಷಾರು ಇಲ್ವಾ?’ ಅಂತ ಅನ್ನಬಾರದು. ` ಭಾರಿ ದೌಲತ್ತು ಆ ನನ್ ಮಗನಿಗೆ’ ಅನ್ನ ಬಾರದು. `ಭಾರಿ ದಿಮಾಕು ಬಿಡ್ ಕಣಯ್ಯಾ ಅವಂದು’ ಅನ್ನಬಾರದು. `ಹಲ್ಕಾ ನನ್ ಮಗನೆ,’ ಅಂತಲೂ ಬೈಯಬಾರದು. `ನಾಲಾಯಕ್’ ಅನ್ನಬಾರದು. ಭಾಡಕೋ, ಭಢವ, ಭೋ…. ಅಂತೆಲ್ಲಾ ಅನ್ನಲೇ ಬಾರದು. `ನೀನು ಒಬ್ಬ ಮೂರ್ಖ ಶಿಖಾಮಣಿ’, `ಅವಿವೇಕಿ’, `ಅಸಂಬದ್ಧ ಮಾತಾಡುವವನು,’ `ಹಿಂಸಾ ಪ್ರವೃತ್ತಿಯವನು’, `ಕೆಲಸಕ್ಕೆ ಬರಲಾರದವನು’ ಅಂತೆಲ್ಲಾ ಅನ್ನಬಹುದೇನೋ.

ಚುನಾವಣೆಗೆ ನಿಲ್ಲಬಾರದು. ``ಎಂಥಾ ಕೇಡುಗಾಲವಿದು, ನಮ್ಮ ಮತಕ್ಕೆ ಯಾವುದೇ ಕಿಮ್ಮತ್ತು ಇಲ್ಲ’’ ಎಂದು ಹಳಹಳಿಸಿದರೂ, ಮತದಾನ ಮಾಡಬೇಕು. ಆದರೆ ಮತಗಣನೆ ಮಾಡಬಾರದು. ಅವರು ಇವರ ವಿರುದ್ಧ ಹಿಕ್ಮತ್ತು ಮಾಡಿದರು, ಅದಕ್ಕೇ ಇವರು ಸೋತರು ಎಂದೆಲ್ಲಾ ಗೋಳಿಡಬಾರದು.

ನಾವು ಇಲ್ಲಿಂದಿಲ್ಲಿಗೆ ಕಳಿಸಿದವರು ಶಾಸನ ಸಭೆಯಲ್ಲಿ ಮಾತಾಡಬೇಕು ಅಷ್ಟೇ. ಬೇರೆ ಏನೂ ಮಾಡಬಾರದು. (ಹೇಗೂ ನಮ್ಮ ಈಗಿನ ಯಾವ ನಾಯಕರಿಗೂ ಸಂಬಳ ಸಾರಿಗೆ ಬಿಟ್ಟು ಬೇರೆ ಯಾವುದರಲ್ಲೂ ಆಸಕ್ತಿ ಇಲ್ಲ ಬಿಡಿ. ಅವರು ಕಾನೂನು- ಕಾಯಿದೆಯಂತೂ ಮಾಡುತ್ತಲೇ ಇಲ್ಲ.) ಆದರೆ ``ನಾವು ಅಷ್ಟು ಖುಷಿಯಿಂದ ಚುನಾಯಿಸಿ ಕಳಿಸಿದ ಇವರು ಏನೂ ಮಾಡುತ್ತಲೇ ಇಲ್ಲವಲ್ಲ? ಏನು ಇವರ ಹಕೀಕತ್ತು?’’ ಎಂದು ನೀವು ಚಿಂತೆ ಮಾಡಬಾರದು.

ಇಷ್ಟೆಲ್ಲಾ ಆದರೂ ಬೇಜಾರು ಮಾಡಿಕೊಳ್ಳ ಬಾರದು. ಆವಾಗೀವಾಗ ನಾಟಕ ನೋಡಬಹುದು. ರಂಗ ತಾಲೀಮಿಗೆ ಮಾತ್ರ ಹೋಗಬಾರದು. ಸಿನಿಮಾ, ನಾಟಕ, ಹಾಡು, ಡಾನ್ಸು, ಯಾವುದಕ್ಕೂ ತಯಾರಿ ಮಾಡಬಾರದು. ಕಾರಿನಲ್ಲಿ ಹೋಗುವಾಗ ಎಫ್ ಎಮ್ ರೇಡಿಯೋ ಕೇಳಬಹುದು. ಆದರೆ ಆರ್ ಜೆ ಹೇಳಿದರು ಅಂತ ಹೇಳಿ `ಮಸ್ತ್ ಮಜಾ’ ಮಾಡಬಾರದು.
ಸಾಹಿತಿಗಳು ಸ್ಮಾರ್ಟ್ ಫೋನಿನಲ್ಲಿ ಸ್ಕ್ರಾಲು ಮಾಡಿಕೊಂಡೋ, ಲ್ಯಾಪುಟಾಪಿನಲ್ಲಿ ಟೈಪು ಮಾಡಿಕೊಂಡೋ,
ಬರವಣಿಗೆ ಮಾಡಬಹುದು. ಆದರೆ ಕಾಗದದ ಮೇಲೆ, ಲೇಖನಿ ಬಳಸಿ ಲೇಖನ ಬರೆಯಬಾರದು. ಬರೆದ ಪತ್ರವನ್ನು ಅಂಚೆ ಕಚೇರಿಯ ಡಬ್ಬಿಯಲ್ಲಿ ಹಾಕಬಾರದು. ಕೋರಿಯರ್ ಕಳಿಸಬಹುದು. 

ಲಾಸ್ಟಿಗೆ
ಭಾಷಾಭಿಮಾನ ಕೆರಳಿ ಮೈ ಬೆವರಿದಾಗ ನೀರು ಕುಡಿಯಬಾರದು. ಅಖಂಡ ಭಾರತಕ್ಕೊಂದೇ ಇರುವ ಪಬ್ಬುಗಳ ರಾಜಧಾನಿಯಲ್ಲಿ ಬೀರು ಕುಡಿದು ಕೊಂಡು ಓಡಾಡಬಹುದೇನೋ. 

ಇಲ್ಲಿಗೆ ನೋಟ್ಸು ಖತಂ ಆದವು. ಲೇಖನದ ಬಗ್ಗೆ ಮುಂದೆ ನೋಡೋಣ.  ----



Comments

Popular posts from this blog

The Delimitation Commission of India and its magic

Abeer Gulal